ಬಿ.ಫಾರಂ ನೀಡದ ಬಿ.ಎಸ್.ವೈ: ಚುನಾವಣೆಯಿಂದ ಹಿಂದೆ ಸರಿದ ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಕೆ.ಮಂಜುನಾಥ್

Update: 2018-04-21 17:22 GMT

ತುಮಕೂರು,ಎ.21: ಟಿಕೆಟ್ ಘೋಷಣೆಯಾಗಿ ಮೂರು ದಿನ ಕಳೆದರೂ ಬಿ.ಫಾರಂ ನೀಡಲು ಹಿಂದೆ ಮುಂದೆ ನೋಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಡವಳಿಕೆಗೆ ಬೇಸತ್ತು ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಕೆ.ಮಂಜುನಾಥ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆಯುವ ಮೂಲಕ ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ. 

ಎ.16 ರಂದು ಪ್ರಕಟಗೊಂಡ ಬಿಜೆಪಿ 2 ನೇ ಪಟ್ಟಿಯಲ್ಲಿ ಹೆಸರಿದ್ದ ಶಿರಾ ಕ್ಷೇತ್ರದ ಬಿ.ಕೆ.ಮಂಜುನಾಥ್‍ಗೆ ಬಿ-ಫಾರಂ ಕೊಡದೆ ಸತಾಯಿಸಿದ್ದರಿಂದ ಬೇಸತ್ತು ಚುನಾವಣೆಯಲ್ಲಿ ಸ್ಪರ್ಧಿಸದಿರುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಬಿ-ಫಾರಂ ಪಡೆಯಲು 'ಬೆಂಗಳೂರಿಗೆ ಬಂದಿದ್ದಾಗ ತಾವು ಪ್ರತಿಕ್ರಿಯಿಸದೆ ಮೌನವಾಗಿದ್ದು, ಇದರಿಂದ ತೀವ್ರ ನೊಂದು ಹಿಂದೆ ಸರಿದಿದ್ದೇನೆ' ಎಂದು ಪಕ್ಷದ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.   

2 ನೇ ಪಟ್ಟಿಯಲ್ಲಿ ಮಂಜುನಾಥ್ ಹೆಸರು ಪ್ರಕಟಗೊಂಡ ಬೆನ್ನಲ್ಲೇ ಶಿರಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ವರಿಷ್ಠರ ನಡೆಯಿಂದ ಅಸಮಾಧಾನಗೊಂಡು ಮಂಜುನಾಥ್ ತೆಗೆದುಕೊಂಡಿರುವ ನಿರ್ಧಾರದಿಂದ ಈಗ ಮತ್ತೆ ಟಿಕೆಟ್ ವಂಚಿತರಾದ ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ, ಯಾದವ ಸಮುದಾಯದ ಸಿ.ಎಂ.ನಾಗರಾಜು ಮತ್ತೆ ಟಿಕೆಟ್ ಪಡೆಯಲು ಉತ್ಸುಕತೆ ತೋರಿದ್ದು, ಇಬ್ಬರಲ್ಲಿ ಯಾರು ಟಿಕೆಟ್ ಪಡೆಯುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News