ಮೂಡಿಗೆರೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು ನಿರಾಶೆಯಾಗಿದೆ: ದೀಪಕ್ ದೊಡ್ಡಯ್ಯ

Update: 2018-04-21 17:52 GMT

ಚಿಕ್ಕಮಗಳೂರು, ಎ.21: ಕಳೆದ ಎರಡು ಬಾರಿಯ ಚುನಾವಣೆಗಳಲ್ಲಿ ತಾನು ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಹಿಂದಿನ ಎರಡು ಬಾರಿಯೂ ತನಗೆ ಟಿಕೆಟ್ ಧಕ್ಕಲಿಲ್ಲ. ಹಾಗಾಗಿ ಈ ಬಾರಿಯಾದರೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯಲಿದ್ದೆ. ಆದರೆ ವರಿಷ್ಠರು ಕೊನೆಗಳಿಗೆಯಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದು, ತನಗೆ ಅತೀವ ನೋವಾಗಿದೆ. ಈ ಕಾರಣಕ್ಕೆ ಮೂಡಿಗೆರೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿಟ್ಟಿನಲ್ಲಿ ಬೆಂಬಲಿಗರೊಂದಿಗೆ ಚರ್ಚೆ ನಡೆಸುತ್ತಿದ್ದೇನೆಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಬಿಜೆಪಿ ಪಕ್ಷದ ಸಂಘಟನೆಯ ಸಕ್ರೀಯ ಕಾರ್ಯಕರ್ತನಾಗಿದ್ದು, ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ಶ್ರಮಿಸಿದ್ದೇನೆ. ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲೂ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ಟಿಕೆಟ್‍ಗಾಗಿ ವರಿಷ್ಠರಲ್ಲಿ ಮನವಿ ಮಾಡಿದ್ದೆ. ಆದರೆ ಟಿಕೆಟ್ ಸಿಗದಿದ್ದಕ್ಕೆ ಬೇಸರಗೊಳ್ಳದೇ ಪಕ್ಷ ಸೂಚಿಸಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇನೆ. ಆದರೆ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ತನಗೆ ವರಿಷ್ಠರು ನಿರಾಶೆಗೊಳಿಸಿದ್ದಾರೆ. ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡಿಕೊಂಡು ತಯಾರಿಯನ್ನೂ ಮಾಡಿಕೊಂಡಿದ್ದೆ. ಆದರೆ ಈ ಬಾರಿಯೂ ಟಿಕೆಟ್ ಕೈ ತಪ್ಪಿರುವುದರಿಂದ ಸ್ವಂತ್ರವಾಗಿ ಸ್ಪರ್ಧಿಸಲು ಚಿಂತನೆ ಮಾಡಿದ್ದೇನೆಂದ ಅವರು, ಮೂಡಿಗೆರೆಯ ರಾಜಕೀಯ ಮೋಟಮ್ಮ, ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ ಅವರ ಸುತ್ತ ಮಾತ್ರ ಸುತ್ತುತ್ತಿದೆ. ಹೊಸಬರು, ವಿದ್ಯಾವಂತರಿಗೆ ಅವಕಾಶ ಸಿಗುತ್ತಿಲ್ಲ. ಮೂಡಿಗೆರೆ ಕ್ಷೇತ್ರ ಸುಸಂಸ್ಕೃತ ಮತದಾರನನ್ನು ಹೊಂದಿದ್ದು, ವಿದ್ಯಾವಂತರು, ಸುಸಂಸ್ಕೃತರು ತಮ್ಮ ಅಭ್ಯರ್ಥಿಗಳಾಗಬೇಕೆಂದು ಬಯಸಿದ್ದಾರೆ. ಈ ಕಾರಣಕ್ಕೆ ವಿದ್ಯಾವಂತನಾಗಿರುವ ತಾನು ಕ್ಷೇತ್ರದ ರಾಜಕೀಯದಲ್ಲಿ ಹೊಸ ಭಾಷ್ಯ ಬರೆಯಲು ಬಯಸಿದ್ದೇನೆಂದರು.

ಬಿಜೆಪಿ ಟಿಕೆಟ್ ಕೈ ತಪ್ಪಿರುವುದರಿಂದ ಬೇಸರವಾಗಿದ್ದರೂ ಮಾನಸಿಕವಾಗಿ ಕುಂದಿಲ್ಲ. ಬೆಂಬಲಿಗರು ಹಾಗೂ ಹಿತೈಷಿಗಳು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಮುಖಂಡರ, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತೇನೆ. ನಂತರ ಈ ಬಗ್ಗೆ ಖಚಿತ ನಿಲುವು ತಳೆಯುತ್ತೇನೆಂದ ಅವರು, ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಹಾಗೂ ವ್ಯಕ್ತಿಯ ಚಾರಿತ್ರ್ಯದ ಮೇಲೂ ಚುನಾವಣೆ ಗೆಲ್ಲಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶೀಘ್ರ ಸ್ಪಷ್ಟ ನಿಲುವು ತಿಳಿಸುತ್ತೇನೆಂದರು.

ಸುದ್ದಿಗೋಷ್ಠಿಯಲ್ಲಿ ದೀಪಕ್ ದೊಡ್ಡಯ್ಯ ಬೆಂಬಲಿಗರಾದ ಸಚಿನ್, ರಮೇಶ್, ಪ್ರಸನ್ನ, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News