ಮಾಧ್ಯಮಗಳು ಜನರ ಪರವಾಗಿ ಕೆಲಸ ಮಾಡಬೇಕು: ಮಾಧ್ಯಮ ಸಂವಾದದಲ್ಲಿ ಪ್ರಕಾಶ್ ರೈ

Update: 2018-04-21 18:02 GMT

ಮಂಡ್ಯ, ಎ.21: ಮಾಧ್ಯಮಗಳು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಎತ್ತಿ ತೋರಿಸಬೇಕು. ಯಾವ ಪಕ್ಷದ ಪರವಾಗಿಯೂ ನಿಲ್ಲದೆ ಜನರ ಪರವಾಗಿ ಕೆಲಸ ಮಾಡಬೇಕು. ನನ್ನ ಮೇಲೆಯೂ ಜನರಿಗೆ ಅನುಮಾನಗಳಿದ್ದರೆ ನೇರವಾಗಿ ಪ್ರಶ್ನಿಸಿ ತಿಳಿದುಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ನಗರದ ಪತ್ರತರ್ಕರ ಭವನದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರೂ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಾನು ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಮಾತನಾಡುತ್ತಿಲ್ಲ. ನಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ. ಇಂದು ರಾಜಕೀಯ ಪಕ್ಷಗಳನ್ನು ಪೂರ್ತಿಯಾಗಿ ನಂಬುವಂತಹ ಪರಿಸ್ಥಿತಿ ಇಲ್ಲವಾಗಿದೆ. ದೊಡ್ಡಕಳ್ಳರು ಮತ್ತು ಚಿಕ್ಕಕಳ್ಳರ ನಡುವೆಯೇ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಗೌರಿ ಲಂಕೇಶ್ ಹತ್ಯೆಯ ನಂತರ ನಡೆದ ವಿದ್ಯಮಾನಗಳು ನನ್ನನ್ನು ಹೆಚ್ಚು ಪ್ರಶ್ನಿಸುವಂತೆ ಮಾಡಿದುವು. ನನಗೆ ಸರಿ ಅನ್ನಿಸಿದ್ದನ್ನು ಮಾತನಾಡುತ್ತೇನೆ. ಪ್ರಶ್ನಿಸುವುದು ಮೂಲಭೂತ ಹಕ್ಕು. ಸರಿಯಾದ ಪ್ರಶ್ನೆಯನ್ನು ಯಾರುಬೇಕಾದರು ಕೇಳಬಹುದು. ಆದರೆ, ಪ್ರಶ್ನೆ ಮಾಡಲೇ ಬಾರದು ಎನ್ನುವುದು ಸರಿಯಲ್ಲ ಪ್ರತಿಪಾದಿಸಿದರು.

ಸ್ವಾತಂತ್ರ್ಯದ ನಂತರ ಜಾತಿ, ಭಾಷೆ ಹೆಸರಿನಲ್ಲಿ ಜನರನ್ನು ಒಡೆದಾಡುವ ಮೂಲಕ ಪಕ್ಷಗಳು ರಾಜಕೀಯ ಮಾಡುತ್ತಿವೆ. ಜನರು ಒಗ್ಗಟ್ಟಾಗಿ ಇಲ್ಲದಿರುವುದರಿಂದ ಚುನಾವಣೆಯಲ್ಲಿ ಅವರನ್ನು ಪ್ರಶ್ನಿಸಲು ಆಗುತ್ತಿಲ್ಲ. ಜನರೆಲ್ಲ ಒಂದಾಗಬೇಕು, ಅವರ ಜತೆಯಲ್ಲಿ ನಾನೂ ಇರುತ್ತೇನೆ ಎಂದು ಅವರು ಕಿವಿಮಾತು ಹೇಳಿದರು.

ಪಾಕಿಸ್ತಾನಕ್ಕೆ ಏಕೆ ಹೋಗಬೇಕು: ಈ ದೇಶದ ಸಂವಿಧಾನ ತಿರುಚುವ ಬಗ್ಗೆ, ಕೋಮುವಾದಿ ಶಕ್ತಿಗಳ ಬಗ್ಗೆ, ಬಿಜೆಪಿ ಬಗ್ಗೆ ಮಾತನಾಡಿದರೆ ಪಾಕಿಸ್ತಾನಕ್ಕೆ ಹೋಗು ಎನ್ನುತ್ತಾರೆ. ನಾನು ಏಕೆ ಪಾಕಿಸ್ತಾನಕ್ಕೆ ಹೋಗಬೇಕು? ನಾನು ಈ ದೇಶದ ಗೌರವಾನ್ವಿತ ಪ್ರಜೆಯಾಗಿದ್ದು ನನ್ನ ವಿಚಾರವನ್ನು ಹೇಳುತ್ತಿದ್ದೇನೆ. ನನ್ನನ್ನು ಪಾಕಿಸ್ತಾನಕ್ಕೆ ಹೋಗು ಎನ್ನಲು ಯಾರಿಗೂ ಹಕ್ಕಿಲ್ಲ ಎಂದು ಪ್ರಕಾಶ್ ರೈ ಎದುರೇಟು ನೀಡಿದರು.

ಪ್ರಶ್ನೆ ಮಾಡಿದ ಮಾತ್ರಕ್ಕೆ ತಲೆ ಕತ್ತರಿಸುತ್ತೇನೆ-ಮೂಗು ಕತ್ತರಿಸುತ್ತೇನೆ ಎಂದು ಹೇಳುವ ಕೋಮುವಾದಿಗಳು ಎಲ್ಲರ ಮೇಲೂ ದಂಡೆತ್ತಿ ಹೋಗುತ್ತಿದ್ದಾರೆ. ಈಗ 22 ರಾಜ್ಯಗಳನ್ನು ಗೆದ್ದಿದ್ದೇವೆ, ಎಲ್ಲ ರಾಜ್ಯಗಳಲ್ಲೂ ಒಂದೇ ಬಣ್ಣ ಮಾಡುತ್ತೇವೆ ಎನ್ನುವ ಬಿಜೆಪಿ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಅವರು ಸವಾಲು ಹಾಕಿದರು.

ಕೋಮುವಾದ ದೇಶಕ್ಕೆ ಅಂಟಿದ ದೊಡ್ಡ ರೋಗ. ಮನುಷ್ಯನನ್ನು ಮನುಷ್ಯನ ರೀತಿ ನೋಡದ ಕೋಮುವಾದಿ ಪಕ್ಷವನ್ನು ದೇಶದ ಜನತೆ ಬೆಂಬಲಿಸಬಾರದು. ಎಲ್ಲ ಸಮುದಾಯದ ಜನರನ್ನು ಸಮಾನವಾಗಿ ಕಾಣುವಂತಹ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಹಾಗಾಗಿ ನಾನು ಬಿಜೆಪಿಯ ಕೋಮುವಾದವನ್ನು ಪ್ರಶ್ನಿಸುತ್ತೇನೆ ಎಂದರು.

ಜಿಲ್ಲಾ ಕಾರ್ಯ ನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಕೆರಗೋಡು, ರಾಷ್ಟ್ರೀಯ ಮಂಡಳಿ ಸದಸ್ಯ ಬಿ.ಪಿ.ಪ್ರಕಾಶ್, ಹಿರಿಯ ಪತ್ರಕರ್ತರಾದ ಡಿ.ಎಲ್.ಲಿಂಗರಾಜು ಹಾಗೂ ಎಸ್.ಕೃಷ್ಣ ಸ್ವರ್ಣಸಂದ್ರ ಉಪಸ್ಥಿತರಿದ್ದರು.

ಹಿಂದೂ ಧರ್ಮ ಉತ್ತಮ ಧರ್ಮವಾಗಿದ್ದು, ಸಹಿಷ್ಣುತೆ ಇದೆ. ಯಾರನ್ನು ಕೊಲ್ಲಿ ಎಂದು ಹೇಳುವುದಿಲ್ಲ. ಆದರೆ, ಕೆಲವರು ಹಿಂದೂ ಧರ್ಮದ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಒಂದು ಮಂದಿರ, ಮಸೀದಿ, ಚರ್ಚ್, ಬುಡಕಟ್ಟು ಜನರ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದೇನೆ. 42 ದೇಶಿ ಹಸುವಿರುವ ಗೋಸಾಲೆ ನನ್ನಲ್ಲಿದ್ದು, 25 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದೇನೆ. ನಾವು ಪೂಜಿಸುವ ಸೂರ್ಯ, ದೇವರು, ನೀರು, ಗಾಳಿ ತಾರತಮ್ಯ ಮಾಡದೆ ಇರುವಾಗ ಮನುಷ್ಯನ ನಡುವೆ ತಾರತಮ್ಯ ಮಾಡುವುದು ಸರಿಯಲ್ಲ. 
-ಪ್ರಕಾಶ್ ರೈ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News