ಪದಚ್ಯುತಿ ನೋಟಿಸ್ ಸಲ್ಲಿಕೆಯಾಗಿದ್ದರೂ ಕರ್ತವ್ಯ ನಿರ್ವಹಿಸಲಿರುವ ಮು.ನ್ಯಾ.ಮಿಶ್ರಾ

Update: 2018-04-22 15:41 GMT

ಹೊಸದಿಲ್ಲಿ,ಎ.22: ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯು ಶನಿವಾರ ಬಿಡುಗಡೆ ಗೊಳಿಸಿರುವ ಕಲಾಪಗಳ ಪಟ್ಟಿಯಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ತನ್ನ ವಿರುದ್ಧ ಪದಚ್ಯುತಿ ನೋಟಿಸ್ ಸಲ್ಲಿಕೆಯಾಗಿದ್ದರೂ ಸೋಮವಾರದಿಂದ ಆರಂಭಗೊಳ್ಳುವ ವಾರದಲ್ಲಿ ತನ್ನ ಕರ್ತವ್ಯವನ್ನು ಎಂದಿನಂತೆ ನಿರ್ವಹಿಸಲಿದ್ದಾರೆ.

ಕಾಂಗ್ರೆಸ್ ಮತ್ತು ಇತರ ಆರು ಪಕ್ಷಗಳು ಮುಖ್ಯ ನ್ಯಾಯಮೂರ್ತಿಗಳ ಪದಚ್ಯುತಿ ಗಾಗಿ ನೋಟಿಸೊಂದನ್ನು ಶುಕ್ರವಾರ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿವೆ. ನೋಟಿಸಿಗೆ 71 ಸಂಸದರು ಸಹಿ ಹಾಕಿದ್ದು,ಈ ಪೈಕಿ ಏಳು ಜನರು ತಾವು ಸಹಿ ಹಾಕಿದ ಬಳಿಕ ರಾಜ್ಯಸಭೆಯಿಂದ ನಿವೃತ್ತರಾಗಿದ್ದಾರೆ. ನೋಟಿಸ್‌ನ್ನು ಅಂಗೀಕರಿಸುವ ಬಗ್ಗೆ ನಾಯ್ಡು ಇನ್ನಷ್ಟೇ ನಿರ್ಧರಿಸಬೇಕಿದೆ.

ಸಭಾಪತಿಗಳು ಅಂಗೀಕರಿಸುವ ಮುನ್ನವೇ ನಿಲುವಳಿ ಸೂಚನೆಯನ್ನು ಬಹಿರಂಗ ಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ರಾಜ್ಯಸಭೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸರಕಾರಿ ಅಧಿಕಾರಿಗಳು ಶನಿವಾರ ಹೇಳಿದ್ದರು. ಮುಖ್ಯ ನ್ಯಾಯಮೂರ್ತಿಗಳು ನೋಟಿಸಿಗೆ ಬಹಿರಂಗವಾಗಿ ಪ್ರತಿಕ್ರಿಯಿಸಿಲ್ಲ.

ಕುತೂಹಲದ ವಿಷಯವೆಂದರೆ ಕಲಾಪಗಳ ಪಟ್ಟಿಯನ್ನು ರಿಜಿಸ್ಟ್ರಿಯು ಸಿದ್ಧಗೊಳಿಸಿದ್ದರೂ ಮುಖ್ಯ ನ್ಯಾಯಮೂರ್ತಿಗಳೇ ತನ್ನ ‘ಮಾಸ್ಟರ್ ಆಫ್ ದಿ ರೋಸ್ಟರ್’ಅಧಿಕಾರವನ್ನು ಬಳಸಿ ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಾಧೀಶರಿಗೆ ಮತ್ತು ಪೀಠಗಳಿಗೆ ಹಂಚಿಕೆ ಮಾಡಿದ್ದಾರೆ.

ಎ.23ರಿಂದ ಆರಂಭಗೊಳ್ಳುವ ವಾರದಲ್ಲಿ ಮು.ನ್ಯಾ.ಮಿಶ್ರಾ ಅವರು ಕೆಲವು ಪ್ರಮುಖ ಪ್ರಕರಣಗಳ ವಿಚಾರಣೆಗಳನ್ನು ನಡೆಸಲಿದ್ದಾರೆ. ಆಧಾರ್ ಸಿಂಧುತ್ವ ಪ್ರಕರಣ,ಜಮ್ಮು-ಕಾಶ್ಮೀರದ ಕಥುವಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರಣೆಯನ್ನು ಚಂಡಿಗಡಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ,ರಾಮ ಜನ್ಮಭೂಮಿ ವಿವಾದ,ಕೇರಳದ ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50ವರ್ಷ ವಯೋಮಾನದ ಮಹಿಳೆಯರ ಪ್ರವೇಶದ ಮೇಲಿನ ವಿವಾದಾತ್ಮಕ ನಿಷೇಧವನ್ನು ಪ್ರಶ್ನಿಸಿರುವ ಮೇಲ್ಮನವಿ ಇವುಗಳಲ್ಲಿ ಸೇರಿವೆ.

ಅಲ್ಲದೆ ಮು.ನ್ಯಾ.ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಪಾರ್ಸಿ ಮಹಿಳೆಯೋರ್ವಳು ಅನ್ಯಧರ್ಮೀಯನನ್ನು ಮದುವೆಯಾದರೆ ತನ್ನ ಧಾರ್ಮಿಕ ಗುರುತನ್ನು ಕಳೆದುಕೊಳ್ಳುತ್ತಾಳೆಯೇ ಎಂಬ ಕಾನೂನು ಪ್ರಶ್ನೆಯ ವಿಚಾರಣೆಯನ್ನೂ ನಡೆಸಲಿದೆ. ಜೊತೆಗೆ ಸಲಿಂಗ ಸಂಬಂಧಗಳನ್ನು ಅಪರಾಧವಾಗಿಸಿರುವ ಐಪಿಸಿಯ ಕಲಂ 377ರ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮು.ನ್ಯಾ.ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News