ಎರಡೂ ಕಡೆ ಸಿದ್ದರಾಮಯ್ಯರನ್ನು ಸೋಲಿಸಲು ಜನ ತೀರ್ಮಾನಿಸಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

Update: 2018-04-22 17:33 GMT

ಮೈಸೂರು,ಎ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ನಿಲ್ಲುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಅವರನ್ನು ಸೋಲಿಸಲು ಜನ ನಿರ್ಧರಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಪ್ರಚಾರ ಆರಂಭಿಸಿರುವ ಅವರು, ರವಿವಾರ ಸಿದ್ಧಲಿಂಗಪುರ, ಬೆಲವತ್ತ, ಕಳಸ್ತವಾಡಿ, ಲಕ್ಷ್ಮೀಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಚುನವಣಾ ಪ್ರಚಾರ ನಡೆಸಿದರು.

ಸಿದ್ದಲಿಂಗಪುರ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡಿದರೂ ಗೆಲ್ಲಲು ಸಾಧ್ಯವಿಲ್ಲ, ಅವರನ್ನು ಸೋಲಿಸಿ ಮನೆಗೆ ಕಳುಹಿಸಲು ಜನ ತೀರ್ಮಾನ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ದುರ್ಬಳಕೆ ಮಾಡಿ ಲೂಟಿ ಹೊಡೆದಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸುತ್ತೇವೆ. ಇಷ್ಟು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ಮಾಡಿರುವ ಅಭಿವೃದ್ಧಿ ಕೆಲಸವಾದರೂ ಏನು, ಸಾರ್ವಜನಿಕರಿಗಾಗಿ ಒಳ್ಳೆಯ ಆಡಳಿತವನ್ನೂ ನೀಡಲಿಲ್ಲ. ದಬ್ಬಾಳಿಕೆಯಲ್ಲೆ ಮುಳುಗಿದ್ದಾರೆ. ಜನರು ಮತದಾನದ ಮೂಲಕ ತಕ್ಕ ಉತ್ತರವನ್ನು ಅವರಿಗೆ ನೀಡಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಎಸ್.ಬಿ.ಎಂ. ಮಂಜು, ಬೆಳವಾಡಿ ಶಿವಕುಮಾರ್, ಆರ್.ಸೋಮಸುಂದರ್ ಸೇರಿದಂತೆ ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News