ಚೋಕ್ಸಿ ವಕೀಲ ಎಂದು ಜರೆದ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಹೋರಾಟ: ಕಾಂಗ್ರೆಸ್ ಮುಖಂಡ ಹೆಚ್.ಎಸ್.ಚಂದ್ರಮೌಳಿ

Update: 2018-04-22 17:38 GMT

ಮಡಿಕೇರಿ,ಎ.22: ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಚೋಕ್ಸಿ ವಕೀಲ ಎಂದು ಅವಹೇಳನಕಾರಿಯಾಗಿ ಬರೆದುಕೊಂಡಿದ್ದು, ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೈಕೋರ್ಟ್‍ನ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಎಸ್.ಚಂದ್ರಮೌಳಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 37 ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಕಪ್ಪುಚುಕ್ಕೆಗಳಿರಲಿಲ್ಲ, ಆದರೆ ಕಾಂಗ್ರೆಸ್ ಮನೆಯೊಳಗಿನ ಬುದ್ದಿಜೀವಿ, ರಾಜಕೀಯವಾಗಿ ಅತಿಯಾಸೆ ಇರುವ ಹಾವೊಂದು ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಆರೋಪಿಸಿದರು. ಬಿಜೆಪಿಯವರು ಅಥವಾ ಬೇರೆ ಯಾರೇ ಆದರೂ ಇನ್ನು ಮುಂದೆ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನಾನು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆಯೇ ಹೊರತು ರಾಜಕೀಯ ಮಾಡುವುದಕ್ಕಾಗಿ ಬಂದಿಲ್ಲ. ರಾಜಕಾರಣದ ಮೂಲಕ ಲೂಟಿ, ದಂಧೆ ಮಾಡುವ ಉದ್ದೇಶವೂ ನನಗಿಲ್ಲ. ಕೊಡಗಿನಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ತನಗಿರುವ ಅನುಭವದ ಆಧಾರದಲ್ಲಿ ಜಿಲ್ಲೆಗೆ ಉಪಕಾರ ಮಾಡಬೇಕೆನ್ನುವ ಉದ್ದೇಶವಿತ್ತು. ಆದರೆ ಬ್ರಿಜೇಶ್ ಕಾಳಪ್ಪ ಹಾಗೂ ದೆಹಲಿಯಲ್ಲಿ ಕುಳಿತಿರುವ ಕಾಂಗ್ರೆಸ್‍ನ ಕೆಲವರು ಹೈಕಮಾಂಡ್ ಹಾದಿ ತಪ್ಪಿಸಿದ್ದಾರೆ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  

ವಕೀಲಿ ವೃತ್ತಿ ಧರ್ಮದ ಆಧಾರದಲ್ಲಿ ಮೆಹಲ್ ಚೋಕ್ಸಿ ಪರ ವಕಾಲತ್ತು ವಹಿಸಲಾಯಿತು. ಪ್ರಕರಣವನ್ನು ತೆಗೆದುಕೊಳ್ಳುವ ಸಂದರ್ಭ ಆ ವ್ಯಕ್ತಿಯ ಹಿನ್ನೆಲೆ ತಿಳಿದಿರಲಿಲ್ಲವೆಂದು ಸಮರ್ಥಿಸಿಕೊಂಡರು. ಅಡ್ವೊಕೇಟ್ ಕಾಯ್ದೆ ಪ್ರಕಾರ ಯಾರೇ ವಕಾಲತ್ತು ವಹಿಸಿಕೊಳ್ಳಲು ಮನವಿ ಮಾಡಿದರು ನಾವು ವಹಿಸಿಕೊಳ್ಳಬೇಕಾಗುತ್ತದೆ. ಕ್ರಿಮಿನಲ್ ಕೇಸ್ ಎಂದು ಪ್ರಕರಣವನ್ನು ತೆಗೆದುಕೊಳ್ಳದೆ ಇದ್ದಲ್ಲಿ ವಕೀಲಿ ಕ್ಷೇತ್ರದಲ್ಲಿನ ಶಿಸ್ತು ಸಮಿತಿ ನಮ್ಮನ್ನು ಪ್ರಶ್ನಿಸುತ್ತದೆ ಮತ್ತು ಶಿಸ್ತು ಕ್ರಮ ಕೈಗೊಳ್ಳುತ್ತದೆ. ವೃತ್ತಿ ಧರ್ಮದ ಆಧಾರದಲ್ಲಿ ವಕಾಲತ್ತು ವಹಿಸಕೊಳ್ಳಬೇಕಾಯಿತೆಂದು ಸಮರ್ಥಿಸಿಕೊಂಡರು.

ನನ್ನ ಬಳಿ ಬಂದವರೆಲ್ಲರು ಕ್ರಿಮಿನಲ್‍ಗಳು ಎಂದು ಅರ್ಥವಲ್ಲ. ಆರೋಪಗಳು ಇರುತ್ತವಷ್ಟೆ. ಆದರೆ, ಚೋಕ್ಸಿ ಪ್ರಕರಣದ ಬಗ್ಗೆ ಸಂಬಂಧ ಕಲ್ಪಿಸಿ ಬ್ರಿಜೇಶ್ ಕಾಳಪ್ಪ ಅವರು ವಿಷಯಕ್ಕಾಗಿ ಕಾಯುತ್ತಿದ್ದ ಬಿಜೆಪಿಗೆ ಇದನ್ನು ದಾಳವನ್ನಾಗಿ ನೀಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಿಜೇಶ್ ಕಾಳಪ್ಪ ಅವರು ದೇವಟ್ ಪರಂಬು ಹಾಗೂ ಟಿಪ್ಪು ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡುವ ರೀತಿ ವರ್ತಿಸಿದ್ದರೆಂದು ಚಂದ್ರಮೌಳಿ ಆರೋಪಿಸಿದರು. 

ಬಿಜೆಪಿಯ ಪ್ರಕಾಶ್ ಜಾವ್ಡೇಕರ್ ಕೂಡ ತಮ್ಮನ್ನು ಚೋಕ್ಸಿ ವಕೀಲನೆಂದು ಟೀಕಿಸಿದ್ದು, ಇವರುಗಳಿಗೆ ಹೀಗೆ ಟೀಕೆ ಮಾಡಲು ಯಾವುದೇ ನೈತಿಕತೆ ಇಲ್ಲವೆಂದರು. ನನ್ನನ್ನು ಇಲ್ಲಿಯವರೆಗೆ ಚೋಕ್ಸಿ ಹೆಸರಿನಲ್ಲಿ ಅವಮಾನಿಸಿದವರೆಲ್ಲರು ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ಖಚಿತವೆಂದು ಸ್ಪಷ್ಟಪಡಿಸಿದರು. ಈ ಪತ್ರಿಕಾ ಹೇಳಿಕೆಯೇ ಅವರುಗಳಿಗೆ ಲೀಗಲ್ ನೋಟಿಸ್ ಎಂದು ಇದೇ ಸಂದರ್ಭ ಚಂದ್ರಮೌಳಿ ತಿಳಿಸಿದರು.

ಕಳೆದ 3 ವರ್ಷಗಳಿಂದ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಚಿಂತನೆಯಡಿ ಸಾಕಷ್ಟು ತೊಡಗಿಸಿಕೊಂಡಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ್ದೇನೆ. ಕಳೆದ 15 ವರ್ಷಗಳಿಂದ ಕೊಡಗಿನ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರದಿಂದ ವಂಚಿತರಾಗಿದ್ದರು, ಕಾಂಗ್ರೆಸ್‍ಗೆ ಮರು ಜೀವ ನೀಡಬೇಕು ಮತ್ತು ಸಮೃದ್ಧಿ ಗೊಳಿಸಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚೆ ನನಗೆ ಮುಖ್ಯಮಂತ್ರಿಗಳು ಕರೆದು ಟಿಕೆಟ್ ನೀಡಿದರು. ಆದರೆ, ಕುತಂತ್ರದಿಂದಾಗಿ ಕೆಲವೇ ಮತಗಳ ಅಂತರದಿಂದ ನಾನು ಸೋಲಬೇಕಾಯಿತು. ನಾನು ಅಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಎಲ್ಲಿಯೂ ಸಂಘರ್ಷ ನಡೆದಿಲ್ಲ. ಒಂದೇ ಒಂದು ಎಫ್‍ಐಆರ್ ಆಗಿಲ್ಲ. ಪ್ರತಿಸ್ಪರ್ಧಿಯೊಂದಿಗೆ ಸ್ನೇಹದಿಂದಲೇ ನಡೆದುಕೊಂಡಿದ್ದೆ. ಇಂದು ವಿಧಾನ ಸಭಾ ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷದಲ್ಲಿ ಏಳು ಎಂಟು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ ಎಂದರೆ ಕಾಂಗ್ರೆಸ್ ಪಕ್ಷ ಸಮೃದ್ಧಿಯಾಗಿದೆಯೆಂದೇ ತಿಳಿದುಕೊಳ್ಳಬೇಕಾಗುತ್ತದೆ ಎಂದು ಚಂದ್ರಮೌಳಿ ಅಭಿಪ್ರಾಯಪಟ್ಟರು. ನನಗೆ ‘ಬಿ’ ಫಾರಂ ನೀಡಿ ಎಂದು ಗುಂಪುಗಾರಿಕೆ ಮಾಡಿಲ್ಲ. ಯಾವ ನಾಯಕರ ಮನೆಗೂ ಹೋಗಿಲ್ಲ. ಜನರ ಮೂಲಕ ಒತ್ತಡವನ್ನೂ ಹೇರಿಲ್ಲ. ಸರ್ವೇ ಮತ್ತು ಗುಪ್ತಚರ ಇಲಾಖೆ ವರದಿ ಪ್ರಕಾರ ನನ್ನ ಹೆಸರು ಮೊದಲ ಸ್ಥಾನದಲ್ಲಿತ್ತು. ಈ ಕಾರಣದಿಂದ ಕೆಪಿಸಿಸಿ ವರಿಷ್ಟರು ಹಾಗೂ ಮುಖ್ಯ ಮಂತ್ರಿಗಳು ನನಗೆ ಸ್ಪರ್ಧಿಸಲು ‘ಬಿ’ ಫಾರಂ ನೀಡಿದರು. 

ಕೊಡಗು ಜಿಲ್ಲೆಗೆ ನಾನು ವಾರದ ಕೊನೆಯ ದಿನಗಳಲ್ಲಿ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೆ. ರಾಜಕೀಯವಾಗಿ ಹಣ ಮಾಡಲು ನಾನು ಬಂದಿಲ್ಲ. ನನ್ನ ಸ್ಥಿತಿ ಹೇಗೆ ಆಗಿದೆ ಎಂದರೆ, ವಿವಾಹಕ್ಕೆ ಸಿದ್ಧಳಾದ ವಧುವಿನ ಬಗ್ಗೆ ವರನ ಮನೆಯವರಿಗೆ ಹುಡುಗಿಯ ನಡತೆ ಸರಿ ಇಲ್ಲವೆಂದು ಪತ್ರ ಬರೆದಾಗ ಆಗುವ ಆಘಾತದಂತಹ ಸ್ಥಿತಿ ಆಗಿದೆಯೆಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಬಾರದೆನ್ನುವ ಉದ್ದೇಶದಿಂದ ಉಮೇದುವಾರಿಕೆ ವಾಪಾಸ್ ಪಡೆದಿರುವುದಾಗಿ ತಿಳಿಸಿದ ಅವರು, ಬ್ರಿಜೇಶ್ ಕಾಳಪ್ಪ ಅವರಿಗೆ ಗ್ರಾಮ ಪಂಚಾಯತ್ ನಲ್ಲಿ ಸ್ಪರ್ಧಿಸುವ ಇಚ್ಛೆ ಇದ್ದಲ್ಲಿ ಸ್ಪರ್ಧಿಸಲಿ ಎಂದು ವ್ಯಂಗ್ಯವಾಡಿದರು. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ನನಗೆ ಈ ರೀತಿಯ ರಾಜಕೀಯ ಬೇಕಾಗಿತ್ತೆ ಎಂದು ಅನಿಸಿತ್ತು. ಆದರೆ, ಕಾಂಗ್ರೆಸ್ ಪಕ್ಷಕ್ಕಾಗಿ ನಾನು ನಿಷ್ಠನಾಗಿದ್ದು, ಯಾರೇ ಅಭ್ಯರ್ಥಿಯಾದರು ಅವರ ಪರ ಪ್ರಚಾರಕ್ಕೆ ಬರಲಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು, ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಹಾಗೂ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿಯಾಗಬೇಕೆನ್ನುವ ನಿರೀಕ್ಷೆ ನಮ್ಮದು ಎಂದರು.

ನನ್ನ ಹಣೆ ಬರಹವನ್ನು ಕಾಂಗ್ರೆಸ್ ಪಕ್ಷವೆ ನಿರ್ಧರಿಸಲಿದೆ ಎಂದು ತಿಳಿಸಿದ ಚಂದ್ರಮೌಳಿ ಜನಪರ ಕಾರ್ಯಗಳನ್ನು ಮಾಡಲು ದೇವರು ನನಗೆ ಶಕ್ತಿಯನ್ನು ಕೊಟ್ಟಿದ್ದು, ಕೊಡಗಿನ ಪರವಾಗಿ ಅಭಿವೃದ್ಧಿ ಪರ ಚಿಂತನೆಯ ಕಾರ್ಯಗಳನ್ನು ಎಲ್ಲೇ ಇದ್ದರು ಮಾಡಲು ಸಿದ್ಧವೆಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು. ಅಬ್ದುಲ್ ರಜಾಕ್, ಮೂಡಾ ಅಧ್ಯಕ್ಷ ಎ.ಸಿ. ಚುಮ್ಮಿ ದೇವಯ್ಯ ಮತ್ತು ಎಸ್.ಎಂ.ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News