ಶಿವಮೊಗ್ಗದಲ್ಲಿ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ; ಸೊತ್ತುಗಳಿಗೆ ಹಾನಿ

Update: 2018-04-22 17:42 GMT

ಶಿವಮೊಗ್ಗ, ಎ. 22: ಬೇಸಿಗೆ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಶಿವಮೊಗ್ಗ ನಗರದ ನಾಗರೀಕರಿಗೆ ಭಾನುವಾರ ಸಂಜೆ ಬಿದ್ದ ಧಾರಾಕಾರ ಮಳೆಯು ನಿರಾಳ ಭಾವ ಮೂಡಿಸಿತು. ಆದರೆ ವರ್ಷಧಾರೆಯ ಜೊತೆ ಕಾಣಿಸಿಕೊಂಡ ಗುಡುಗು, ಬಿರುಗಾಳಿಯು ನಗರದ ವಿವಿಧೆಡೆ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಉಂಟು ಮಾಡಿತು. 

ಹಲವೆಡೆ ಮರಗಳು ವಾಹನ, ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದಿವೆ. ಕೆಲವೆಡೆ ಚರಂಡಿ, ರಾಜಕಾಲುವೆಗಳಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯೇ ಮೇಲೆಯೇ ಹರಿದಿದೆ. ವಿದ್ಯುತ್ ಕಂಬಗಳು ಹಾನಿಗೀಡಾದ ಕಾರಣದಿಂದ ನಗರದ ಕೆಲ ಬಡಾವಣೆಗಳಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ಏರುಪೇರಾಗಿತ್ತು. 

ವಿನೋಬನಗರ 60 ಅಡಿ ರಸ್ತೆ, ವೆಂಕಟೇಶನಗರ, ಇಂದಿರಾ ನಗರ, ಕಲ್ಲಳ್ಳಿ ಬಡಾವಣೆ, ಶುಭ ಮಂಗಳ ಕಲ್ಯಾಣ ಮಂದಿರ ರಸ್ತೆ, ಎಪಿಎಂಸಿ, ಹಳೇ ಮಂಡ್ಲಿ ಸೇರಿದಂತೆ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಇದರಿಂದ ರಸ್ತೆ ಬದಿ ನಿಲ್ಲಿಸಿದ್ದ ಸುಮಾರು ಮೂರಕ್ಕೂ ಅಧಿಕ ಕಾರುಗಳು, 10 ಕ್ಕೂ ಅಧಿಕ ವಿದ್ಯುತ್ ಕಂಬಗಳು ಜಖಂಗೊಂಡಿರುವ ಮಾಹಿತಿಗಳು ಲಭ್ಯವಾಗಿವೆ. 

ಬಿರುಗಾಳಿಯಿಂದ ಶುಭ ಮಂಗಳ ಕಲ್ಯಾಣ ಮಂದಿರದ ಮುಂಭಾಗ ಹಾಕಲಾಗಿದ್ದ ಭಾರೀ ಪ್ರಮಾಣದ ಪೆಂಡಾಲ್ ಕೆಳಕ್ಕೆ ಬಿದ್ದು ಹಾನಿಯಾಗಿದ್ದರೆ, ಕಲ್ಲಳ್ಳಿಯ ಕರಿಯಣ್ಣನ ಬಿಲ್ಡಿಂಗ್ ಸಮೀಪ ಮನೆಯ ಮೇಲ್ಭಾಗದಲ್ಲಿ ಹಾಕಲಾಗಿದ್ದ ತಗಡಿನ ಮೇಲ್ಛಾವಣಿ ಹಾರಿ ಹೋಗಿದೆ. ಸುಮಾರು 100 ಅಡಿ ದೂರದಲ್ಲಿ ಬಿದ್ದಿದೆ. ಅದೃಷ್ಟವಶಾತ್ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ತಗಡಿನ ಮೇಲ್ಚಾವಣಿಯು ಬಿರುಗಾಳಿಗೆ ಸಿಲುಕಿ ಹಾರಿ ಹೋಗುವ ರಭಸಕ್ಕೆ, ತೆಂಗಿನ ಮರವೊಂದರ ಮೇಲ್ಭಾಗದ ಭಾಗವೇ ಕತ್ತರಿಸಿ ಹೋಗಿದೆ. ಜನವಸತಿ ಪ್ರದೇಶ ಅಥವಾ ಸಾರ್ವಜನಿಕರ ಮೇಲೆ ಎನಾದರೂ ಈ ಶೀಟ್ ಬಿದ್ದಿದ್ದರೆ ಭಾರೀ ಸಾವುನೋವು ಉಂಟಾಗುವ ಸಾಧ್ಯತೆಗಳಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹರಸಾಹಸ: ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಬಿದ್ದ ಮಳೆಯು ಮೆಸ್ಕಾಂಗೆ ತೀವ್ರ ಸಮಸ್ಯೆ ಉಂಟು ಮಾಡಿತು. ಹಲವೆಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದರೆ, ಮತ್ತೆ ಕೆಲವೆಡೆ ಬಿರುಗಾಳಿಗೆ ವಿದ್ಯುತ್ ಕಂಬಗಳೇ ಧರಾಶಾಹಿಯಾಗಿದ್ದವು. ಇದರಿಂದ ನಗರದ ಬಹುತೇಕ ಕಡೆ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಏರುಪೇರಾಗುವಂತೆ ಮಾಡಿತ್ತು. ಅವ್ಯವಸ್ಥಿತ ವಿದ್ಯುತ್ ಕಂಬಗಳನ್ನು ಸರಿಪಡಿಸಿ, ಸುಗಮ ವಿದ್ಯುತ್ ಪೂರೈಕೆಗೆ ಹಲವು ಗಂಟೆಗಳ ಕಾಲ ಮೆಸ್ಕಾಂ ಸಿಬ್ಬಂದಿಗಳು ಹರಸಾಹಸ ನಡೆಸುವಂತಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News