ಎಂಎಲ್‍ಸಿಯಲ್ಲ, ಇದು ಎಂಎಲ್‍ಎ ಚುನಾವಣೆ ಎಂಬ ಅರಿವಿರಲಿ: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್

Update: 2018-04-22 17:45 GMT

ಶಿವಮೊಗ್ಗ, ಎ. 22: 'ಎಂಎಲ್‍ಸಿ ಚುನಾವಣೆ ರೀತಿಯಲ್ಲಿ ಇಲ್ಲಿ ಏಳೆಂಟು ಸಾವಿರ ಮತದಾರರಿಲ್ಲ. ಇದು ಎಂಎಲ್‍ಎ ಎಲೆಕ್ಷನ್. ಸುಮಾರು 2.50 ಲಕ್ಷ ಮತದಾರರಿದ್ದಾರೆ. ಜೆಡಿಎಸ್ ಪರವಾದ ಅಲೆಯಿದೆ. ಪಕ್ಷ ಗೆಲ್ಲಲೇಬೇಕು. ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಎಚ್ಚರಿಕೆಯಿಂದ ಹೆಜ್ಜೆಯಿಡಿ' ಎಂದು ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ನೇರಾನೇರ ಚಾಟಿ ಬೀಸಿದ್ದಾರೆ.

ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಅಭ್ಯರ್ಥಿ ಹೆಚ್.ಎನ್.ನಿರಂಜನ್ ಕಾರ್ಯವೈಖರಿ ಬಗ್ಗೆ ಹರಿತ ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣಾ ಪಾಠ ಮಾಡಿದ್ದಾರೆ. 

ಅಲೆಯಿದೆ: 'ಚುನಾವಣೆಯಿಂದ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಪರವಾದ ಅಲೆಯಿದೆ. ಹೆಚ್.ಡಿ.ಕುಮಾರಸ್ವಾಮಿಯವರ ನಾಯಕತ್ವಕ್ಕೆ ಎಲ್ಲ ವರ್ಗಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ ಮಧು ಬಂಗಾರಪ್ಪರಂತಹ ನಾಯಕತ್ವವಿದೆ. ಆರ್.ಎಂ.ಮಂಜುನಾಥಗೌಡರವರು ಪಕ್ಷಕ್ಕೆ ಆಗಮಿಸಿ ತೀರ್ಥಹಳ್ಳಿಯಲ್ಲಿ ಅಭ್ಯರ್ಥಿಯಾಗಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸುಲಭವಾಗಿದೆ ಎಂಬುವುದನ್ನು ನಾವು ಅರಿತುಕೊಳ್ಳಬೇಕಾಗಿದೆ' ಎಂದು ತಿಳಿಸಿದ್ದಾರೆ. 

ಆದರೆ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವಾಗುತ್ತಿಲ್ಲ. ಹಾಗೂ ಮತದಾರರನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ಪಕ್ಷಕ್ಕೆ ಗೆಲ್ಲುವಂತಹ ವಾತಾವರಣವಿರುವ ವೇಳೆಯಲ್ಲಿ ಈ ರೀತಿಯ ಬೆಳವಣಿಗೆಗಳು ಪಕ್ಷಕ್ಕೆ ಸಾಕಷ್ಟು ಹೊಡೆತ ನೀಡುತ್ತವೆ. ಇದನ್ನು ಅರಿತುಕೊಂಡು ಅಭ್ಯರ್ಥಿ ಹೆಚ್.ಎನ್.ನಿರಂಜನ್‍ರವರು ತಮ್ಮ ಕಾರ್ಯಶೈಲಿ ಬದಲಾಯಿಸಿಕೊಳ್ಳಬೇಕು. ಪಕ್ಷದ ವರಿಷ್ಠರು ನೀಡಿರುವ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಮುಂದಾಗಬೇಕು. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಉದಾಸೀನ ಸಲ್ಲದು ಎಂದು ತಾಕೀತು ಮಾಡಿದ್ದಾರೆ. 

ಜಯ ನಿಶ್ಚಿತ: ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಮತದಾರರು ತಕ್ಕ ಕಲಿಸಲು ನಿರ್ಧರಿಸಿದ್ದಾರೆ. ಜೆಡಿಎಸ್‍ಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರು ತಮ್ಮೆಲ್ಲ ಭಿನ್ನಾಭಿಪ್ರಾಯ ಮರೆಯಬೇಕು. ಪ್ರತಿಯೋರ್ವ ಮತದಾರರನ್ನು ಭೇಟಿಯಾಗಿ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಬೇಕು. ಹಾಗೆಯೇ ಕೇಂದ್ರ ಬಿಜೆಪಿ ಹಾಗೂ ರಾಜ್ಯ ಕಾಂಗ್ರೆಸ್ ನೇತೃತ್ವದ ಜನ ವಿರೋಧಿ ನೀತಿಗಳ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. 

ಸಮಾರಂಭದಲ್ಲಿ ಅಭ್ಯರ್ಥಿ ಹೆಚ್.ಎಸ್.ನಿರಂಜನ್, ಮುಖಂಡರಾದ ನಾಗರಾಜ್ ಕಂಕಾರಿ, ಶಾಂತಾ ಸುರೇಂದ್ರ, ಮಹಮ್ಮದ್ ಯೂಸೂಫ್ ಭಯ್ಯಾ, ಹೆವನ್ ಹಬೀಬ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

'ಮಧು ಬಂಗಾರಪ್ಪರ ನಂಬಿಕೆ ಉಳಿಸಬೇಕು' 
'ಪಕ್ಷದ ನಾಯಕ ಮಧು ಬಂಗಾರಪ್ಪರವರು ಶಿವಮೊಗ್ಗ ನಗರ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿವಹಿಸಿದ್ದಾರೆ. ಈ ಬಾರಿ ಗೆಲ್ಲಬೇಕೆಂಬ ಉದ್ದೇಶದಿಂದ ಹೆಚ್.ಎಸ್.ನಿರಂಜನ್‍ರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲ ಕೆಲಸ ಮಾಡಬೇಕು. ಶಿವಮೊಗ್ಗದಲ್ಲಿ ಜೆಡಿಎಸ್ ಗೆಲ್ಲಿಸುವ ಮೂಲಕ ಮಧು ಬಂಗಾರಪ್ಪರ ನಂಬಿಕೆ ಉಳಿಸುವ ಕೆಲಸವನ್ನು ಕ್ಷೇತ್ರದ ನಾಯಕರು ಮಾಡಬೇಕು' ಎಂದು ಎಂ.ಶ್ರೀಕಾಂತ್‍ರವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News