ಮಡಿಕೇರಿ: ಐಮಂಡ ಕಪ್ ಕ್ರಿಕೆಟ್; ಬಲ್ಲಮಾವಟಿ ತಂಡ ಸತತ 7 ನೇ ಬಾರಿ ಚಾಂಪಿಯನ್

Update: 2018-04-22 17:48 GMT

ಮಡಿಕೇರಿ,ಎ.22: ಕೊಡವ ಐರಿ ಕುಟುಂಬಗಳ ಮಧ್ಯೆ ನಡೆಯುವ ಐಮಂಡ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಹಾಲಿ ಚಾಂಪಿಯನ್ ಬಲ್ಲಮಾವಟಿ ತಂಡ ಸತತ ಏಳನೇ ಬಾರಿ ಪ್ರಶಸ್ತಿ ಜಯಿಸಿದೆ. ಆತಿಥೇಯ ಐಮಂಡ ತಂಡವನ್ನು ಫೈನಲ್ ಹಣಾಹಣಿಯಲ್ಲಿ ಏಳು ವಿಕೆಟ್‍ಗಳಿಂದ ಮಣಿಸಿ ಬಲ್ಲಮಾವಟಿ ತಂಡ ಚಾಂಪಿಯನ್ ಪಟ್ಟಕೇರಿತು. 

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಐಮಂಡ ತಂಡ ನಿಗದಿತ ಎಂಟು ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 48 ರನ್‍ಗಳ ಸಾಧಾರಣ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬಲ್ಲಮಾವಟಿ ತಂಡ ಓವರ್‍ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಐದು ಓವರ್ ಗಳಲ್ಲಿ ಗುರಿ ತಲುಪಿತು. ವಿಜೇತ ತಂಡದ ಚಂಗಪ್ಪ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರೆ, ರಾಬಿನ್ ಅತ್ಯುತ್ತಮ ಬೌಲರ್ ಮತ್ತು ಐಮಂಡ ತಂಡದ ದುಶ್ಯಂತ್ ಅತ್ಯುತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆಲ್ ರೌಂಡರ್ ಪ್ರದರ್ಶನ ನೀಡಿದ ಬಲ್ಲಮಾವಟಿ ತಂಡದ ಚಂಗಪ್ಪ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದರು. ಇದೇ ವೇಳೆ ಮಹಿಳೆಯರ ಹಗ್ಗ ಜಗ್ಗಾಟ ಹಣಾಹಣಿಯಲ್ಲಿ ಆತಿಥೇಯ ಐಮಂಡ ತಂಡ ಬೊಳ್ಳಮ್ಮ ನಾಂಗಲ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ ಆಂಗಿರ ಕುಸುಮ್, ಜನಾಂಗ ಬಾಂಧವರ ಒಗ್ಗಟ್ಟಿಗೆ ಈ ರೀತಿಯ ಕ್ರೀಡಾಕೂಟಗಳು ಅಗತ್ಯವೆಂದರು. ಕೊಡವ ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್ ಮಾತನಾಡಿ, ಐರಿ ಜನಾಂಗದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.

ಐಮಂಡ ಕ್ರಿಕೆಟ್ ಹಬ್ಬದ ಸಲಹಾ ಸಮಿತಿ ಅಧ್ಯಕ್ಷ ಅಪ್ಪಣ, ಸದಸ್ಯರಾದ ನಾಣಯ್ಯ, ಕೊಡವ ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಾಧಕರಾದ ಐರೀರ ಬೋಪಯ್ಯ, ನಾಟಿ ವೈದ್ಯೆ ಐಮಂಡ ಕಾಮವ್ವ ಗಣಪತಿ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಐಮಂಡ ಕುಟುಂಬದ ತವರುಮನೆ ಹುಡುಗಿಯರನ್ನು ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News