ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಸುಗ್ರೀವಾಜ್ಞೆ ಸುರಿವ ಮಳೆಗೆ ಹರಿದ ಕೊಡೆ

Update: 2018-04-23 04:10 GMT

ಗಲ್ಲು ಶಿಕ್ಷೆ ಸರಿಯೋ ತಪ್ಪೋ ಎನ್ನುವ ಚರ್ಚೆಯೇ ತಾರ್ಕಿಕ ಅಂತ್ಯ ಕಾಣದ ಸಂದರ್ಭದಲ್ಲಿ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಯೊಂದನ್ನು ಸರಕಾರ ಹೊರಡಿಸಿದೆ. ಗಲ್ಲು ಶಿಕ್ಷೆಯನ್ನು ವಿರೋಧಿಸುವ ಹೋರಾಟಗಾರರು ಕೂಡ ಇದಕ್ಕೆ ತಕ್ಷಣ ಆಕ್ಷೇಪ ವ್ಯಕ್ತಪಡಿಸಲಾಗದಂತಹ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗಿದೆ. ಕಥುವಾದಲ್ಲಿ ಎಂಟು ವರ್ಷದ ಮಗುವಿನ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಆಕೆಯ ಬರ್ಬರ ಕೊಲೆಯ ಬೆನ್ನಿಗೇ ದೇಶಾದ್ಯಂತ ಎಳೆ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಪುಟ ತುಂಬಾ ಅತ್ಯಾಚಾರ ಪ್ರಕರಣಗಳ ವರದಿಗಳನ್ನು ಹೊತ್ತುಕೊಂಡು ದಿನಪತ್ರಿಕೆಗಳು ಮನೆಬಾಗಿಲನ್ನು ತಟ್ಟುತ್ತಿವೆ.

ನಿರ್ಭಯಾ ಪ್ರಕರಣದಲ್ಲಿ ತರುಣಿಯ ಅತ್ಯಾಚಾರ ನಡೆದಿದ್ದರೆ, ಇದೀಗ ಎಂಟು ತಿಂಗಳ ಮಗುವಿನ ಮೇಲೆ ನಡೆಯುವ ಅತ್ಯಾಚಾರಗಳನ್ನು ಪತ್ರಿಕೆಗಳಲ್ಲಿ ಓದಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಇದನ್ನು ತಡೆಯಲು ಸರಕಾರದ ಬಳಿ ಏನೇನೂ ಇಲ್ಲ. ಕಥುವಾ ಪ್ರಕರಣದ ಬಳಿಕ ಮಕ್ಕಳ ಮೇಲೆ ನಡೆಯುತ್ತಿರುವ ಪ್ರತಿ ಅತ್ಯಾಚಾರ ವರದಿಯೂ ಮಾಧ್ಯಮಗಳಲ್ಲಿ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ವಿಶ್ವಸಂಸ್ಥೆಯೂ ಸೇರಿದಂತೆ ಅಂತರ್‌ರಾಷ್ಟ್ರೀಯ ಮಟ್ಟದ ನಾಯಕರು ಭಾರತ ಸರಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ, ಈ ಛೀಮಾರಿಯನ್ನು ಎದುರಿಸಲು ಸರಕಾರ ತಕ್ಷಣಕ್ಕೆ ಕಂಡು ಕೊಂಡ ಉಪಾಯ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯ ಸುಗ್ರೀವಾಜ್ಞೆ. ಈ ಸುಗ್ರೀವಾಜ್ಞೆಯ ಕುರಿತಂತೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಮುಖ್ಯವಾಗಿ ಮಕ್ಕಳನ್ನು ಅತ್ಯಾಚಾರ ಗೈದವರಿಗೆ ಮರಣದಂಡನೆಯಾಗಬೇಕಾದರೆ ಅತ್ಯಾಚಾರಕ್ಕೊಳಗಾದ ಬಾಲಕಿ 12 ವರ್ಷದ ಒಳಗೆ ಇರಬೇಕು. ಇದೀಗ ಒಂದು ಗಂಭೀರ ಪ್ರಶ್ನೆ ತಲೆಯೆತ್ತಿದೆ.

ಸರಕಾರದ ಪ್ರಕಾರ 12 ವರ್ಷ ದಾಟಿದ ಬಾಲಕಿ ಅತ್ಯಾಚಾರಗೈಯುವುದಕ್ಕೆ ಅರ್ಹವೆನಿಸಿ ಬಿಡುತ್ತದೆಯೇ? 13 ವರ್ಷದ ಬಾಲಕಿಯ ಅತ್ಯಾಚಾರ ಎಸಗುವ ವ್ಯಕ್ತಿಗೂ 11 ವರ್ಷದ ಬಾಲಕಿಯ ಅತ್ಯಾಚಾರ ಎಸಗುವ ರಾಕ್ಷಸನಿಗೂ ಇರುವ ವ್ಯತ್ಯಾಸವಾದರೂ ಏನು? ಒಂದೆಡೆ 18 ವರ್ಷ ಪೂರ್ತಿಯಾಗದವಳನ್ನು ಮದುವೆಯಾಗುವುದೇ ಅಪರಾಧ ಎಂದು ಕಾನೂನು ಹೇಳುತ್ತದೆ. ಅಷ್ಟೇ ಅಲ್ಲ, 18 ವರ್ಷದ ಕೆಳಗಿನ ಹದಿಹರೆಯದವಳೊಂದಿಗೆ ಸಮ್ಮತಿ ಪಡೆದು ಲೈಂಗಿಕ ಸಂಬಂಧವನ್ನು ಹೊಂದಿದರೂ ಅದು ಅತ್ಯಾಚಾರದ ವ್ಯಾಪ್ತಿಯೊಳಗೆ ಬರುತ್ತದೆ. ಹೀಗಿರುವಾಗ, ಒಬ್ಬ ದುಷ್ಕರ್ಮಿ 12 ವರ್ಷ ಮೇಲ್ಪಟ್ಟ ಒಂದು ಬಾಲಕಿಯ ಮೇಲೆ ಅತ್ಯಾಚಾರವೆಸಗುವುದು, ಆಕೆಯನ್ನು ಕೊಂದು ಹಾಕುವುದು ಯಾಕೆ ಅಷ್ಟೇ ಬರ್ಬರವಲ್ಲ? 12 ವರ್ಷಕ್ಕೆ ಮೇಲ್ಪಟ್ಟ ಹುಡುಗಿಯನ್ನು ಅತ್ಯಾಚಾರಗೈದ ಆರೋಪಿಗಳ ಮೇಲಿನ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆಯಾದರೂ, ಅದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯಕ್ಕೆ ಪರಿಣಾಮಕಾರಿಯಾದ ನ್ಯಾಯವನ್ನು ನೀಡುವುದಕ್ಕೆ ವಿಫಲವಾಗಿದೆ.

ಭಾರತದಂತಹ ದೇಶದಲ್ಲಿ ಅತ್ಯಾಚಾರವೆನ್ನುವುದು ಹೆಣ್ಣಿನ ವ್ಯಕ್ತಿತ್ವದ ಮೇಲೆ ನಡೆಸುವ ದಾಳಿಯಾಗಿದೆ. ಇಲ್ಲಿ ಅತ್ಯಾಚಾರ ಎಸಗುವವನು ಬರೇ ಕಾಮಾಂಧನಾಗಿರಬೇಕಾಗಿಲ್ಲ. ಹೆಣ್ಣಿನ ವ್ಯಕ್ತಿತ್ವವನ್ನು ನಾಶ ಮಾಡುವ, ಆಕೆಯ ಬದುಕುವ ಸ್ವಾತಂತ್ರವನ್ನು ನಿರಾಕರಿಸುವ ಭಾಗವಾಗಿ ಈ ದೇಶದಲ್ಲಿ ಅತ್ಯಾಚಾರ ಬಳಕೆಯಾಗುತ್ತಾ ಬಂದಿದೆ. ಇದು ಕೇವಲ ದೈಹಿಕ ದೌರ್ಜನ್ಯ ಅಲ್ಲ. ಮಾನಸಿಕ ದಾಳಿಯೂ ಹೌದು. ಒಬ್ಬನ ಕೈ, ಕಾಲುಗಳನ್ನು ಕತ್ತರಿಸಿದರೆ, ಅಂಗವಿಕಲನಾಗಿದ್ದುಕೊಂಡೇ ತಲೆಯೆತ್ತಿ ಬದುಕಬಹುದಾದ ವ್ಯವಸ್ಥೆ ಭಾರತೀಯ ಸಮಾಜದಲ್ಲಿದೆ. ಆದರೆ, ಒಬ್ಬ ಅತ್ಯಾಚಾರಕ್ಕೊಳಗಾದ ಹೆಣ್ಣು ಈ ದೇಶದಲ್ಲಿ ಅಷ್ಟೇ ಸ್ವಾಭಿಮಾನದಿಂದ ತಲೆಯೆತ್ತಿ ಬದುಕಲು ಪ್ರಯತ್ನಿಸಿದರೆ ಅಕೆಯ ಮೇಲೆ ಇನ್ನಷ್ಟು ದಾಳಿಗಳು ನಡೆಯುತ್ತವೆ. ಅತ್ಯಾಚಾರವನ್ನು ದೈಹಿಕ ದೌರ್ಜನ್ಯದ ಭಾಗವಾಗಿಯಷ್ಟೇ ನಮ್ಮ ಕಾನೂನು ವ್ಯವಸ್ಥೆ ನೋಡಿಕೊಂಡು ಬಂದಿರುವುದರಿಂದ, ಕಾನೂನಿನ ಹಿಡಿತದಿಂದ ದುಷ್ಕರ್ಮಿಗಳು ಸುಲಭವಾಗಿ ನುಣುಚಿಕೊಳ್ಳುತ್ತಾರೆ. ಆದರೆ ದೌರ್ಜನ್ಯಕ್ಕೊಳಾಗದ ಹೆಣ್ಣು ಮಾತ್ರ, ಜೀವನ ಪರ್ಯಂತ ಬೇರೆ ಬೇರೆ ರೀತಿಯಲ್ಲಿ ಶಿಕ್ಷೆ ಅನುಭವಿಸುತ್ತಲೇ ಬದುಕಬೇಕಾಗುತ್ತದೆ.

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗುತ್ತದೆಯೋ ಇಲ್ಲವೋ, ಆದರೆ ಸಂತ್ರಸ್ತೆಗೆ ಮಾತ್ರ ಜೀವಾವಧಿ ಶಿಕ್ಷೆಯನ್ನು ಈ ಸಮಾಜ ಕಡ್ಡಾಯಗೊಳಿಸಿದೆ. ಇಂತಹ ಸನ್ನಿವೇಶದಲ್ಲಿ, ಮಹಿಳೆಯ ಬದುಕುವ ಹಕ್ಕನ್ನೇ ಪ್ರಶ್ನಿಸುವ, ಆಕೆಯ ಸ್ವಂತಿಕೆಯನ್ನೇ ನಾಶ ಮಾಡುವ ಹವಣಿಕೆಯನ್ನು ಹೊಂದಿರುವ ಅತ್ಯಾಚಾರ, ಕೊಲೆಯ ಒಂದು ಭಾಗವೇ ಆಗಿದೆ. ಅಥವಾ ಭಾರತದಲ್ಲಿ ಕೊಲೆಗಿಂತಲೂ ಭೀಕರವಾದ ಪರಿಣಾಮವನ್ನು ಮಹಿಳೆಯರ ಮೇಲೆ ಬೀರಬಹುದಾದ ದೌರ್ಜನ್ಯವಾಗಿದೆ. ಕೆಳವರ್ಗವನ್ನು ಅದರಲ್ಲೂ ದಲಿತರನ್ನು ದಮನಿಸಲು ಅತ್ಯಾಚಾರವನ್ನು ಹೇಗೆ ಮೇಲ್ವರ್ಗ ಬಳಸುತ್ತಾ ಬಂದಿದೆ ಎನ್ನುವುದನ್ನು ನಾವು ನೋಡಿದ್ದೇವೆ. ಖೈರ್ಲಾಂಜಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅದಕ್ಕೆ ಅತ್ಯುತ್ತಮ ಉದಾಹರಣೆ. ಸ್ವಾಭಿಮಾನದಿಂದ ಬದುಕಲು ಹವಣಿಸಿದ ದಲಿತರ ಕುಟುಂಬವನ್ನು ಮೇಲ್ವರ್ಗದ ಒಂದು ಗುಂಪು ಸಾಮೂಹಿಕವಾಗಿ ಅತ್ಯಾಚಾರಗೈದು ಬರ್ಬರವಾಗಿ ಕೊಂದು ಹಾಕಿತು. ಇದು ಒಂದು ನಿರ್ದಿಷ್ಟ ಕುಟುಂಬದ ದುರಂತ ಮಾತ್ರವಲ್ಲ, ಉಳಿದ ದಲಿತ ಸಮುದಾಯದ ಜನರಿಗೆ ನೀಡಿದ್ದ ಎಚ್ಚರಿಕೆಯೂ ಆಗಿತ್ತು. ಗುಜರಾತ್ ಕೋಮುಗಲಭೆಯಲ್ಲಿ ಅತ್ಯಾಚಾರ ಕಾಮಾಂಧರಿಂದಷ್ಟೇ ನಡೆಯಲಿಲ್ಲ. ಅಷ್ಟೇ ಏಕೆ, ಕಥುವಾದಲ್ಲಿ ಎಂಟು ವರ್ಷದ ಮಗುವಿನ ಅತ್ಯಾಚಾರ ನಡೆಸಿದವರು ಕಾಮಾಂಧರು, ಧರ್ಮಾಂಧರೂ ಆಗಿದ್ದರು. ಅವರ ಕ್ರೌರ್ಯ ಒಂದು ಹೆಣ್ಣಿನ ಮೇಲೆ ಮಾತ್ರವಲ್ಲ ಒಂದು ಸಮುದಾಯದ ಮೇಲೆ ವ್ಯಕ್ತವಾಗಿತ್ತು.

ಇಷ್ಟಕ್ಕೂ ಸುಗ್ರೀವಾಜ್ಞೆ ಪ್ರಕಟವಾದಾಕ್ಷಣ ಮಹಿಳೆಯ, ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರು ಸಾಲು ಸಾಲಾಗಿ ಗಲ್ಲಿಗೇರುತ್ತಾರೆ ಎಂದು ಭಾವಿಸುವುದು ಇನ್ನೊಂದು ಮೂರ್ಖತನ. ಈಗಾಗಲೇ ಇರುವ ಕಾನೂನನ್ನು ಬಳಸಿ ಎಷ್ಟು ಅತ್ಯಾಚಾರಿಗಳಿಗೆ ಶಿಕ್ಷೆಯಾಗಿದೆ ಎಂದು ಅವಲೋಕಿಸಿದರೆ ನಿರಾಶೆ ಕಾಡುತ್ತದೆ. ಅತ್ಯಾಚಾರದಂತಹ ಸೂಕ್ಷ್ಮ ವಿಷಯಗಳನ್ನು ನಿರ್ವಹಿಸುವುದರಲ್ಲೇ ಕಾನೂನು ವ್ಯವಸ್ಥೆ ಎಡವಿರುವುದು ಎದ್ದು ಕಾಣುತ್ತಿದೆ. ಇತ್ತೀಚೆಗೆ ನಮ್ಮ ನ್ಯಾಯಾಲಯವೇ ‘ದಲಿತ ದೌರ್ಜನ್ಯ ಕಾನೂನು ದುರುಪಯೋಗವಾಗುತ್ತಿದೆ’ ಎಂದು ಹೇಳಿ ಇರುವ ಕಾನೂನನ್ನು ದುರ್ಬಲಗೊಳಿಸುವ ಸಾಹಸಕ್ಕೆ ಕೈ ಹಾಕಿತು. ಒಂದೆಡೆ ದೇಶಾದ್ಯಂತ ದಲಿತ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯ ಈ ಕಾನೂನು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊ ಳುತ್ತಿದೆ ಎನ್ನುವುದನ್ನು ತಲೆಕೆಡಿಸಿಕೊಳ್ಳದೆ ಅದನ್ನು ದುರ್ಬಲಗೊಳಿಸಲು ಅತ್ಯಾಸಕ್ತಿ ವಹಿಸುವಾಗ ಅತ್ಯಾಚಾರಕ್ಕೆ ಸಂಬಂಧಪಟ್ಟ ಕಾನೂನನ್ನು ಅದು ಗಂಭೀರವಾಗಿ ಸ್ವೀಕರಿಸುತ್ತದೆ ಎನ್ನುವುದಕ್ಕೆ ಭರವಸೆಯಿದೆಯೇ? ಮಹಿಳೆಯರ ಹಿತರಕ್ಷಣೆಗೆ ಸಂಬಂಧಿಸಿದ ಹಲವು ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬದಲು, ಅದು ದುರ್ಬಳಕೆಗೊಳ್ಳುತ್ತಿರುವುದರ ಬಗ್ಗೆಯೇ ನ್ಯಾಯಾಲಯ ಚಿಂತಿಸಿದ್ದು ಹೆಚ್ಚು. ವರದಕ್ಷಿಣೆ ಕಾಯ್ದೆ ಅಸ್ತಿತ್ವದಲ್ಲಿದೆಯಾದರೂ ಅದು ವರದಕ್ಷಿಣೆಯನ್ನು ತಡೆಯಲು ಯಶಸ್ವಿಯಾಗಿದೆಯೇ?

ಮಕ್ಕಳನ್ನು ಅತ್ಯಾಚಾರಗೈದರೆ ಮೊತ್ತ ಮೊದಲು ಪ್ರಕರಣ ದಾಖಲಾಗಬೇಕು. ಬಳಿಕ ಸಾಕ್ಷಗಳನ್ನು ಸಂಗ್ರಹಿಸಬೇಕು. ಕಥುವಾ ಪ್ರಕರಣದಲ್ಲಿ ಏನು ಸಂಭವಿಸಿತು ಎನ್ನುವುದಕ್ಕೆ ದೇಶ ಸಾಕ್ಷಿಯಾಗಿದೆ. ಆರಂಭದಲ್ಲಿ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಲಾಗಿತ್ತು. ಪೊಲೀಸರು ಅತ್ಯಾಚಾರ ನಡೆದೇ ಇಲ್ಲ ಎಂದು ಘೋಷಿಸಿದ್ದರು. ಇದಾದ ಬಳಿಕ ವಿಶೇಷ ತನಿಖೆ ನಡೆದು, ಭೀಕರ ಕೃತ್ಯ ಬಯಲಿಗೆ ಬಂತು. ಆದರೆ ವಕೀಲರೇ ಬೀದಿಗಿಳಿದು ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಹೋರಾಟ ನಡೆಸಿದ್ದರು. ಇಂತಹ ಸಮಾಜದಲ್ಲಿ, ಮಕ್ಕಳ ಮೇಲೆ ನಡೆದ ಅತ್ಯಾಚಾರವನ್ನು ಸಾಬೀತು ಪಡಿಸುವುದು ಸುಲಭವೇ? ಅತ್ಯಾಚಾರದ ಜೊತೆಗೆ ಒಂದು ಸರಕಾರವೇ ಪರೋಕ್ಷವಾಗಿ ಭಾಗಿಯಾಗಿರುವಾಗ, ಅದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಅವಕಾಶ ದೇಶದ ಪ್ರಧಾನಿಗೇ ಇಲ್ಲದೇ ಇರುವಾಗ, ಮಕ್ಕಳ ಮೇಲಿನ ಅತ್ಯಾಚಾರಕ್ಕಾಗಿ ತಂದಿರುವ ಸುಗ್ರೀವಾಜ್ಞೆಯಿಂದ ಅತ್ಯಾಚಾರವನ್ನು ತಡೆಯಬಹುದು ಎಂದು ನಂಬುವುದಾದರೂ ಹೇಗೆ? ಒಂದು ರೀತಿಯಲ್ಲಿ, ಜೋರಾಗಿ ಸುರಿಯುತ್ತಿರುವ ಮಳೆಯನ್ನು ತಡೆದುಕೊಳ್ಳಲಾಗದ ಸರಕಾರ ತಕ್ಷಣಕ್ಕೆ ಪಾರಾಗಲು ಹರಿದ ಕೊಡೆಯೊಂದನ್ನು ಜನರ ಮುಂದಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News