ಸಿಜೆಐ ವಿರುದ್ಧ ಪದಚ್ಯುತಿ ನೋಟಿಸ್ ತಿರಸ್ಕರಿಸಿದ ಉಪರಾಷ್ಟ್ರಪತಿ

Update: 2018-04-23 14:58 GMT

ಹೊಸದಿಲ್ಲಿ, ಎ. 23: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸಲ್ಲಿಸಿದ ಪದಚ್ಯುತಿ ನೋಟಿಸನ್ನು ಉಪ ರಾಷ್ಟ್ರಪತಿ ಹಾಗೂ ರಾಜ್ಯ ಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಸೋಮವಾರ ತಿರಸ್ಕರಿಸಿದ್ದಾರೆ.

ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ವೆಂಕಯ್ಯ ನಾಯ್ಡು ಅವರು ಉನ್ನತ ಕಾನೂನು ಹಾಗೂ ಸಾಂವಿಧಾನಿಕ ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದಕ್ಕಾಗಿ ಅವರು ಪ್ರವಾಸ ಮೊಟುಕುಗೊಳಿಸಿ ರವಿವಾರ ಹೊಸದಿಲ್ಲಿಗೆ ಹಿಂದಿರುಗಿದ್ದರು ಎಂದು ಮೂಲಗಳು ತಿಳಿಸಿವೆ.

ಈ ನಿಲುವಳಿ ಸೂಚನೆಗೆ ಸಾಕಷ್ಟು ಅರ್ಹತೆಯ ಕೊರತೆ ಇದೆ ಹಾಗೂ ಇಲ್ಲಿನ ಆರೋಪ ನಂಬಲು ಅಥವಾ ಅಂಗೀಕರಿಸಲು ಸಾಧ್ಯವಿಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪ್ರಸಕ್ತ ಪ್ರಕರಣದಲ್ಲಿ ಮಾಡಿರುವ ಆರೋಪ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಡೆಗಣಿಸುವ ಗಂಭೀರ ಪ್ರವೃತ್ತಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನೋಟಿಸ್‌ನಿಂದ ಉದ್ಭವಿಸಿದ ಎಲ್ಲ ಅಂಶಗಳ ಬಗ್ಗೆ ತಾನು ವಿಸ್ತೃತವಾಗಿ ವೈಯಕ್ತಿಕ ಮಾತುಕತೆ ನಡೆಸಿದ್ದೇನೆ ಹಾಗೂ ಈ ನೋಟಿಸಿನಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಮಾಡಲಾದ ಪ್ರತಿ ಆರೋಪವನ್ನು ಪರಿಶೀಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ‘‘ಎಚ್ಚರಿಕೆಯಿಂದ ಪರಿಶೀಲನೆ ಹಾಗೂ ಮನನ ಮಾಡಿದ ಬಳಿಕ ಈ ನೋಟಿಸ್ ಅನ್ನು ಒಪ್ಪಿಕೊಳ್ಳಬೇಕಾಗಿಲ್ಲ ಎಂಬ ನಿರ್ಧಾರಕ್ಕೆ ಬಂದೆ. ವಾಸ್ತವವಾಗಿ ಇದರಲ್ಲಿ ದೃಢವಾದ ಪರಿಶೀಲನಾರ್ಹ ಆಪಾದನೆ ಇಲ್ಲ ಎಂದು ತಿಳಿದುಕೊಂಡೆ’’ ಎಂದು ಅವರು ಹೇಳಿದ್ದಾರೆ. ‘‘ಯಾವುದೇ ಚಿಂತನೆ, ನುಡಿ, ಕ್ರಿಯೆಯಿಂದ ಆಡಳಿತದ ಯಾವುದೇ ಸ್ತಂಬಕ್ಕೆ ಹಾನಿಯಾಗುವುದಕ್ಕೆ ನಾನು ಅವಕಾಶ ನೀಡಲಾರೆ’’ ಎಂದು ಅವರು ಹೇಳಿದ್ದಾರೆ. ನಿಲುವಳಿ ಸೂಚನೆ ಒಳಗೊಂಡಿರುವ ವಿಷಯ ಪರಿಗಣಿಸಿ ಹಾಗೂ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗಿನ ಸಂವಹನದಿಂದ ಸ್ವೀಕರಿಸಿದ ಅಂಶಗಳನ್ನು ಆಧರಿಸಿ ನಿಲುವಳಿ ಸೂಚನೆ ಒಪ್ಪಿಕೊಳ್ಳಬೇಕಾಗಿಲ್ಲ ಎಂಬ ನಿರ್ಧಾರಕ್ಕೆ ಬಂದೆ. ಅದರಂತೆ ನಾನು ನಿಲುವಳಿ ಸೂಚನೆ ತಿರಸ್ಕರಿಸಿದೆ ಎಂದು ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News