ನೋಯ್ಡಾ: ಕುಖ್ಯಾತ ಪಾತಕಿ ಬಲರಾಜ್ ಭಾಟಿ ಎನ್‌ಕೌಂಟರ್‌ಗೆ ಬಲಿ

Update: 2018-04-23 17:38 GMT

ನೋಯ್ಡಾ, ಎ.23: ಇಲ್ಲಿಯ ಬರೌಲಾ ಪ್ರದೇಶದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಪಾತಕಿ ಬಲರಾಜ್ ಭಾಟಿ ಹತನಾಗಿದ್ದು ಪೊಲೀಸ್ ಸಿಬ್ಬಂದಿ ಸಹಿತ ಮೂವರು ಗಾಯಗೊಂಡಿದ್ದಾರೆ.

 ಬಲರಾಜ್ ಹಾಗೂ ಆತನ ಗ್ಯಾಂಗ್‌ನ ಸದಸ್ಯರು ಪ್ರಯಾಣಿಸುತ್ತಿದ್ದ ಕಾರನ್ನು ಉತ್ತರಪ್ರದೇಶ ಹಾಗೂ ಹರ್ಯಾಣ ಪೊಲೀಸರ ವಿಶೇಷ ಕಾರ್ಯ ಪಡೆಯವರು ತಡೆದು ನಿಲ್ಲಿಸಿದಾಗ ಕಾರಿನಲ್ಲಿದ್ದವರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಪಾತಕಿ ಬಲರಾಜ್ ಭಾಟಿ ಗಾಯಗೊಂಡಿದ್ದುಮ, ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬುಲಂದರ್‌ಶಹರ್ ನಿವಾಸಿಯಾಗಿರುವ ಬಲರಾಜ್ ದಿಲ್ಲಿ, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ ಹಲವು ಡಕಾಯಿತಿ, ಕೊಲೆ, ಅಪಹರಣ ಇತ್ಯಾದಿ ಪಾತಕ ಕೃತ್ಯ ನಡೆಸಿದ್ದಾನೆ. ಈ ಹಿಂದೆ ಬುಲಂದರ್‌ಶಹರ್ ಜೈಲಿನಲ್ಲಿದ್ದಾಗ ಅಲ್ಲಿಯ ಜೈಲರ್‌ನೊಂದಿಗೆ ವಾಗ್ಯುದ್ದ ನಡೆಸಿದ್ದ ಬಲರಾಜ್, ಇದೀಗ ಆ ಘಟನೆಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಜೈಲರ್‌ನನ್ನು ಹತ್ಯೆ ಮಾಡಲು ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾದ್ರಿ ನಗರಪಾಲಿಕೆಯ ಮಾಜಿ ಅಧ್ಯಕ್ಷ ವಿಜಯ್ ಭಾಟಿ ಹತ್ಯೆ ಪ್ರಕರಣರದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಈತನನ್ನು ಬಂಧಿಸುವವರಿಗೆ ದಿಲ್ಲಿ ಪೊಲೀಸರು 1 ಲಕ್ಷ ರೂ. ಹಾಗೂ ಉ.ಪ್ರದೇಶ ಪೊಲೀಸರು 50,000 ರೂ. ಪುರಸ್ಕಾರ ಘೋಷಿಸಿದ್ದರು. ಈತನ ಕುಟುಂಬದ ಸದಸ್ಯರೂ ಪಾತಕ ಕೃತ್ಯ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News