ಮಡಿಕೇರಿ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಪಿ.ಚಂದ್ರಕಲಾ ನಾಮಪತ್ರ ಸಲ್ಲಿಕೆ

Update: 2018-04-24 11:03 GMT

ಮಡಿಕೇರಿ,ಎ.24: ಜಿ.ಪಂ.ಸದಸ್ಯರಾದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಇಂದು ನಾಮಪತ್ರ ಸಲ್ಲಿಸಿದರು.

ನಗರದ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಚಂದ್ರಕಲಾ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.

ನಗರದ ಶ್ರೀ ಕೋಟೆ ಗಣಪತಿ ದೇವಾಲಯ, ಮಹದೇವಪೇಟೆಯ ಮಸೀದಿ ಮತ್ತು ಸಂತ ಮೈಕೆಲರ ಚರ್ಚ್‍ನಲ್ಲಿ ಪಕ್ಷದ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕೆ.ಪಿ.ಚಂದ್ರಕಲಾ ಅವರು ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ರು ರವೀಂದ್ರ, ವಕೀಲರಾದ ನಾಗೇಂದ್ರ ಬಾಬು ಮತ್ತು ಕುಶಾಲನಗರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಕರಿಯಪ್ಪ ಅವರು ಈ ಸಂದರ್ಭ ಉಪಸ್ಥಿತರಿದ್ದರು.

ಕಳೆದ ಕೆಲವು ದಿನಗಳಿಂದ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದ ಗೊಂದಲಗಳು ಬಗೆಹರಿದು ಕೆ.ಪಿ. ಚಂದ್ರಕಲಾ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ಇಂದು ಚಂದ್ರಕಲಾ ಅವರು ಪಕ್ಷದ ಪ್ರಮುಖರಾದ ಎಂಎಲ್‍ಸಿ ವೀಣಾ ಅಚ್ಚಯ್ಯ, ಚಂದ್ರಮೌಳಿ, ವಿರೂಪಾಕ್ಷಯ್ಯ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ಚುನಾವಣಾ ವೀಕ್ಷಕರಾದ ವೆಂಕಪ್ಪ ಗೌಡ, ಮಾಜಿ ಎಂಪಿ ವಿಜಯಶಂಕರ್ ಸೇರಿದಂತೆ ಹಲವು ಗಣ್ಯರೊಂದಿಗೆ ದೇವಸ್ಥಾನ, ಮಸೀದಿ ಮತ್ತು ಚರ್ಚ್‍ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಾನು ದುರ್ಬಲಳಲ್ಲ
ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗುರುತಿಸಿ, ತನ್ನ ಸ್ಪರ್ಧೆಗೆ ‘ಬಿ’ ಫಾರಂ ನೀಡುವ ಮೂಲಕ ಪಕ್ಷ ಅವಕಾಶ ಕಲ್ಪಿಸಿರುವುದು ಸಂತಸ ಮೂಡಿಸಿದೆ. ವಿವಿಧ ಜವಾಬ್ದಾರಿಯುತ ಹುದ್ದೆಗಳ ಮೂಲಕ ಓರ್ವ ಶಾಸಕ ಮಾಡುವುದಕ್ಕಿಂತಲೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಿರುವ ತಾನು ಎಂದಿಗೂ ದುರ್ಬಲಳಲ್ಲವೆಂದು ನಾಪಂಡ ಮುತ್ತಪ್ಪ ಅವರು ನೀಡಿದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಹಿಂದಿನ ಜಿಲ್ಲಾ ಪರಿಷತ್ ಹಾಗೂ ಈಗಿನ ಜಿಲ್ಲಾ ಪಂಚಾಯತ್ ಗಳಿಗೆ ಮೂರು ಬಾರಿ ಆಯ್ಕೆಯಾಗಿರುವ ತಾನು, ಒಂದು ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷಳಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಎಸ್.ಎಂ.ಕೃಷ್ಣ ಅವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭ ರಾಜ್ಯ ಒಳಚರಂಡಿ ಮಂಡಳಿಯ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದು, ತನ್ನ ಈ ಅಧಿಕಾರದ ಅವಧಿಯಲ್ಲಿ ಕಾವೇರಿಯಿಂದ 12 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ, ಹಾರಂಗಿಯಿಂದ ಸೋಮವಾರಪೇಟೆಗೆ ಕುಡಿಯುವ ನೀರಿನ ಯೋಜನೆಯ ಜಾರಿ, 50 ಕೋಟಿ ವೆಚ್ಚದಲ್ಲಿ ಕುಶಾಲನಗರದಲ್ಲಿ ಒಳಚರಂಡಿ ವ್ಯವಸ್ಥೆಗಳನ್ನು ಕಲ್ಪಿಸಿದ್ದೇನೆ. ಜನತೆ ಈ ಚುನಾವಣೆಯಲ್ಲಿ ತನ್ನನ್ನು ಆಶೀರ್ವದಿಸಿದಲ್ಲಿ ಕುಶಾಲನಗರದಕ್ಕೆ ಪ್ರತ್ಯೇಕ ತಾಲೂಕಿನ ಸ್ಥಾನ ಮಾನ ಮತ್ತು ಜಿಲ್ಲೆಯ ಭೂ ಹಿಡುವಳಿಗಳಿಗೆ ಸಂಬಂಧಿಸಿದ ಟೆನ್ಯೂರ್ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ಜನರಿಗೆ ಅನುಕೂಲತೆ ಕಲ್ಪಿಸಬೇಕೆನ್ನುವುದು ತನ್ನ ಉದ್ದೇಶವಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News