ಶಿವಮೊಗ್ಗ: ಮತದಾರರ ಜಾಗೃತಿಗಾಗಿ ಮ್ಯಾರಥಾನ್ ಓಟ

Update: 2018-04-24 11:30 GMT

ಶಿವಮೊಗ್ಗ, ಎ. 24: ನಗರದ ಎಲ್ಲಾ ವಾರ್ಡುಗಳು ಹಾಗೂ ಮಹಾನಗರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮತದಾರರೆಲ್ಲರೂ ಮೇ 12ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಮತಚಲಾಯಿಸಲು ಮುಂದಾಗುವಂತೆ ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ಅವರು ಹೇಳಿದರು. 

ಅವರು ಇಂದು ಮತದಾರರ ಜಾಗೃತಿಗಾಗಿ ಮಹಾನಗರಪಾಲಿಕೆ ಮತ್ತು ಜಿಲ್ಲಾ ಓಲಂಪಿಕ್ ಅಸೋಸಿಯೇಷನ್ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮ್ಯಾರಾಥಾನ್ ಓಟ ಮತ್ತು ಸ್ಕೇಟಿಂಗ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನಗರದ ಪ್ರದೇಶದ ಅನೇಕ ವಾರ್ಡುಗಳಲ್ಲಿ ನಿಗದಿತ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಶೇ.99ರಷ್ಟು ಮತದಾನ ಮಾಡಿಸಲು ಸಾರ್ವಜನಿಕರಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದವರು ನುಡಿದರು.

ಅರ್ಹ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿ ಮತದಾನಕ್ಕೆ ಪ್ರೇರೇಪಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅದಕ್ಕಾಗಿ ಇಂತಹ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ವಿಶ್ವದ ಅತಿದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆ ನಮ್ಮದಾಗಿದ್ದು, ಅದರ ಯಶಸ್ವಿಗಾಗಿ ನಾವೆಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು. ಓರ್ವ ಸಮರ್ಥ ಜನನಾಯಕನನ್ನು ಆಯ್ಕೆ ಮಾಡಲು ನಮಗಿರುವ ಅವಕಾಶ ಇದಾಗಿದ್ದು, ಮತದಾನ ಮಾಡುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳುವಂತೆ ಅವರು ಸೂಚಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಓಲಂಪಿಕ್ ಅಸೋಸಿಯೇಷನ್‍ನ ಕಾರ್ಯದರ್ಶಿ ಶಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ವಾರ್ತಾಧಿಕಾರಿ ಶಫಿ ಸಾದುದ್ದೀನ್, ಮಹಾನಗರಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಶಿವಯೋಗಿ ಎಲಿ ಸೇರಿದಂತೆ ಓಲಂಪಿಕ್ಸ್ ಸಂಸ್ಥೆಯ ಪದಾಧಿಕಾರಿಗಳು, ಕ್ರೀಡಾಳುಗಳು ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News