ಬಾಗೇಪಲ್ಲಿ: ಬಿಜೆಪಿ ಅಭ್ಯರ್ಥಿ ನಟ ಪಿ.ಸಾಯಿಕುಮಾರ್ ನಾಮಪತ್ರ ಸಲ್ಲಿಕೆ

Update: 2018-04-24 12:27 GMT

ಬಾಗೇಪಲ್ಲಿ,ಎ.24: ಕಳೆದ 2008ರ ಚುನಾವವಣೆಯಲ್ಲಿ ಗೆಲುವಿನ ಹತ್ತಿರಕ್ಕೆ ಬಂದು ಸೋತೆ. ಈಗ ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಚಿತ್ರ ನಟ ಪಿ.ಸಾಯಿಕುಮಾರ್ ತಿಳಿಸಿದರು.

ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಇಂದು ಚಿತ್ರ ನಟ, ಬಿಜೆಪಿ ಅಭ್ಯರ್ಥಿ ಪಿ.ಸಾಯಿಕುಮಾರ್ ರವರು ಚುನಾವಣಾಧಿಕಾರಿ ಜಗಧೀಶ್ ಗಂಗಣ್ಣನವರ್ ರವರಿಗೆ ನಾಮಪತ್ರವನ್ನು ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಗೊಂದಲಗಳು ಇದ್ದಂತೆ ನಮ್ಮ ಪಕ್ಷದಲ್ಲಿಯೂ ಹಲವು ಗೊಂದಲಗಳಿದ್ದವು. ಆದರೆ ಅಧಿಕೃತವಾಗಿ ನನಗೆ ಪಕ್ಷದಿಂದ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಪಕ್ಷದ ಆಕಾಂಕ್ಷಿಗಳಾಗಿದ್ದ  ರಾಮಲಿಂಗಪ್ಪ ಮತ್ತು  ಅರಿಕೆರೆ ಕೃಷ್ಣರೆಡ್ಡಿ ರವರು ನನ್ನ ಚುನಾವಣಾ ಪ್ರಚಾರದಲ್ಲಿ ತೊಡಗಿಸುವ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸುವುದಾಗಿ ತಿಳಿಸಿದರು.

2008 ರ ಚುನಾವಣೆಯಲ್ಲಿ ಗೆಲುವಿನ ಸಮೀಪಕ್ಕೆ ಬಂದು ಸೋಲು ಅನುಭವಿಸಿದ್ದೇನೆ. ನಂತರದ ಚುನಾವಣೆಯಲ್ಲಿ ನನ್ನ ವೈಯಕ್ತಿಕ ಕಾರಣಗಳಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಈ ಸಂಬಂಧ ಕ್ಷೇತ್ರದ ಜನತೆ ಕ್ಷಮೆಯನ್ನು ಸಹ ಅನೇಕ ಸಲ ಕೇಳಿದ್ದೇನೆ ಎಂದ ಅವರು, 2018ರ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆಯ ಋಣವನ್ನು ತೀರಿಸುವ ಹಾಗೂ ಸೇವೆ ಸಲ್ಲಿಸುವ ಉದ್ದೇಶದಿಂದ ಚುನಾವಣಾ ಕಣದಲ್ಲಿ ಇದ್ದೇನೆ ಎಂದರು.

ಪ್ರದಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಅಧಿಕಾರದ ಅವಧಿಯಲ್ಲಿ ಮಾಡಿರುವ ಅನೇಕ ಜನಪರ ಯೋಜನೆಗಳೇ ಈ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಪಿ.ಸಾಯಿಕುಮಾರ್ ರವರ ಧರ್ಮಪತ್ನಿ ಸುರೇಖ, ಮಗ ಹಾಗೂ ಚಿತ್ರ ನಟ ಆಧಿತ್ಯ, ಸಹೋದರ ಅಯ್ಯಪ್ಪ, ಮಂಡಲಾಧ್ಯಕ್ಷ ಎಸ್.ಟಿ.ಬಾಬು,ಮುಖಂಡರಾದ ಮಲ್ಲಿಕಾರ್ಜುನರೆಡ್ಡಿ, ಪಿ.ಸುರೇಶ್, ನಂಜೇಶ್ ರೆಡಿ, ಮಂಜುನಾಥ,ಅಶ್ವಥಪ್ಪ, ಧೀರಜ್ ಮತ್ತಿತರರು ಹಾಜರಿದ್ದರು.

ಚಿತ್ರಶೀರ್ಷಿಕೆ: ಚಿತ್ರ ನಟ ಪಿ.ಸಾಯಿಕುಮಾರ್ ಅವರು ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್ ಅವರಿಗೆ ತಮ್ಮ ಧರ್ಮ ಪತ್ನಿಯೊಂದಿಗೆ ನಾಮಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News