ವಿಜಯೇಂದ್ರಗೆ ತಪ್ಪಿದ ಟಿಕೆಟ್: ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಕಲ್ಲು

Update: 2018-04-24 14:56 GMT

ಮೈಸೂರು,ಎ.24: ವರುಣಾ ದಿಂದ ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಇಂದು ಸಹ ಬಿಜೆಪಿ ಕಾರ್ಯಕರ್ತರ ಹೈ ಡ್ರಾಮಾ ಮುಂದುವರೆಯಿತು.

ನಗರದ ಇಟ್ಟಿಗೆಗೂಡಿನಲ್ಲಿರುವ ಬಿಜೆಪಿ ಕಚೇರಿಗೆ ಮಂಗಳವಾರ ಕಲ್ಲು ತೂರಿದ ಕಾರ್ಯಕರ್ತರು, ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದರು. ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಕಚೇರಿಯ ಬಾಗಿಲು ತೆರದು ಕೆಲಸ ನಡೆಸುತಿದ್ದ ಪಧಾದಿಕಾರಿಗಳು ತಕ್ಷಣ ಬಾಗಿಲನ್ನು ಮುಚ್ಚಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಕಚೇರಿಯ ನಾಮಫಲಕವನ್ನು ಕಿತ್ತುಹಾಕಿದರು. ಬಿಜೆಪಿಗೆ ಧಿಕ್ಕಾರ, ಅನಂತ್ ಕುಮಾರ್, ಅನಂತ್ ಕುಮಾರ್ ಹೆಗಡೆ, ಸಂತೋಷ್, ಆರ್.ಅಶೋಕ್‍ಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿಯಿಂದಲೇ ಯಡಿಯೂರಪ್ಪ ಉಳಿದುಕೊಂಡಿರುವ ಖಾಸಗಿ ಹೋಟೆಲ್ ಮುಂದೆ ಕಾದು ಕುಳಿತಿದ್ದ ಕಾರ್ಯಕರ್ತರು ಬೆಳಿಗ್ಗೆಯೂ ಸಹ ಪ್ರತಿಭಟನೆ ನಡೆಸಿದರು. ವಿಜಯೇಂದ್ರ ಅಭಿಮಾನಿಗಳು ಗನ್‍ಹೌಸ್ ವೃತ್ತದ ಬಸವೇಶ್ವರ ಪುತ್ಥಳಿ ಬಳಿ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ವರಿಷ್ಠರ ವಿರುದ್ಧ ಧಿಕ್ಕಾರ ಕೂಗಿದರು.

ನಿನ್ನೆ ನಡೆದ ಗಲಾಟೆಯಿಂದ ಕಂಗಾಲಾದ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಡರಾತ್ರಿಯೇ ಮೈಸೂರಿಗೆ ಆಗಮಿಸಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರುಗಳ ಜೊತೆ ನಿರಂತರ ಸಭೆ ನಡೆಸಿದರು.

ಇನ್ನು ಹೋಟೆಲ್ ಮುಂದೆ ಅಭಿಮಾನಿಗಳ ಪ್ರತಿಭಟನೆ ಹೆಚ್ಚಾದಂತೆ ಹೊರ ಬಂದ ಯಡಿಯೂರಪ್ಪ ಕಾರ್ಯಕರ್ತರುಗಳನ್ನು ಸಮಾಧಾನಪಡಿಸಿದರು.  ಇದೇ ವೇಳೆ ಮಾತನಾಡಿದ ಯಡಿಯೂರಪ್ಪ, ವರುಣಾ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ. ವಿಜಯೇಂದ್ರನಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ವರುಣಾ ಚುನಾವಣಾ ಉಸ್ತುವಾರಿಯನ್ನು ವಿಜಯೇಂದ್ರ ವಹಿಸಿಕೊಂಡು ಇಪ್ಪತ್ತು ದಿನಗಳವರೆಗೆ ಇಲ್ಲೇ ಇರುತ್ತಾರೆ. ರಾಜ್ಯದ ಜನ ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News