ಮೈಸೂರು: ಅತ್ಯಾಚಾರಕ್ಕೊಳಗಾದ 9 ವರ್ಷದ ಬಾಲಕಿ ಮೃತ್ಯು

Update: 2018-04-24 15:16 GMT

ಮೈಸೂರು,ಎ.24: ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣದಂಡನೆ ವಿಧಿಸುವ ಫೋಕ್ಸೋ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರದಿಂದ ಸುಗ್ರೀವಾಜ್ಞೆ ಸಿಕ್ಕ 48 ಗಂಟೆಯೊಳಗೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎನ್ನಲಾದ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ಬಾಲಕಿಯು ಮೃತಪಟ್ಟ ಘಡನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಘಟನೆಯ ವಿವರ: ರವಿವಾರ ಶಾಲೆಗೆ ರಜೆ ಇದ್ದುದ್ದರಿಂದ ಸ್ನೇಹಿತೆಯರೊಂದಿಗೆ ಆಟವಾಡಲು ತೆರಳಿದ್ದ ಬಾಲಕಿ ಸ್ವಲ್ಪ ಸಮಯದ ನಂತರ ಮನೆಗೆ ಬಂದಿದ್ದಾಳೆ. ಮರುದಿನ ಬೆಳಿಗ್ಗೆ ತಲೆ ನೋಯುತ್ತಿದೆ ಎಂದು ಪೋಷಕರಿಗೆ ತಿಳಿಸಿದ್ದು, ಪೋಷಕರು ಬಾಲಕಿಗೆ ತಲೆನೋವಿನ ಮಾತ್ರೆ ನುಂಗಿಸಿ ಸುಮ್ಮನಾಗಿದ್ದಾರೆ. ಮಾತ್ರೆ ನುಂಗಿದ ಕೆಲವೇ ನಿಮಿಷದಲ್ಲಿ ಬಾಲಕಿ ವಾಂತಿ ಮಾಡಿಕೊಂಡಿದ್ದು, ಇದರಿಂದ ಗಾಬರಿಗೊಂಡ ಪೋಷಕರು ಕೂಡಲೇ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ಬಾಲಕಿಯನ್ನು ಪರೀಕ್ಷಿಸಿ ಆಕೆಯ ಮೇಲೆ ಅತ್ಯಾಚಾರವಾಗಿದೆ. ಕೂಡಲೇ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.

ನಂತರ ಪೋಷಕರು ಬಾಲಕಿಯನ್ನು ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು 'ಬಾಲಕಿಗೆ ತೀವ್ರ ರಕ್ತಸ್ರಾವವಾಗಿದೆ. ನಮ್ಮಲ್ಲಿ ಹೆಚ್ಚಿನ ಸೌಲಭ್ಯಗಳ ಕೊರತೆಯಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ' ತಿಳಿಸಿದ್ದಾರೆ. ಆದರೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News