ಟಿಕೆಟ್ ಕೈ ತಪ್ಪಿದ ಬಗ್ಗೆ ಬಿಎಸ್ ವೈ ಪುತ್ರ ವಿಜಯೇಂದ್ರ ಹೇಳಿದ್ದೇನು ?

Update: 2018-04-24 15:29 GMT

ಮೈಸೂರು,ಎ.24: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರತ್ಯಕ್ಷರಾದ ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ವಿಜಯೇಂದ್ರ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ರಾತ್ರಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅಭ್ಯರ್ಥಿ ಅಲ್ಲದಿದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ದಯವಿಟ್ಟು ಕಾರ್ಯಕರ್ತರು ಅಭಿಮಾನಿಗಳು ಆವೇಶಕ್ಕೆ ಒಳಗಾಗಿ ತಮ್ಮ ನಿರ್ಧಾರ ಬದಲಾಯಿಸಬೇಡಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ, ಕೆಲವೇ ದಿನಗಳಲ್ಲಿ ಇಷ್ಟೊಂದು ಅಭಿಮಾನ ತೋರಿದ ನಿಮ್ಮ ಪ್ರೀತಿ ನನ್ನ ಹಾಗೂ ಪಕ್ಷದ ಮೇಲೆ ಹೀಗೆ ಇರಲಿ. ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಬಿಜೆಪಿಯನ್ನು ಗೆಲ್ಲಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡೋಣ ಎಂದು ಹೇಳಿದರು.

ನಾನು ವರುಣಾ ಕ್ಷೇತ್ರದ ಅಭ್ಯರ್ಥಿ ಎಂದು ಎಲ್ಲಿಯೂ ಕೂಡ ಹೇಳಿರಲಿಲ್ಲ. ವರುಣಾದಲ್ಲಿನ ಸಮಸ್ಯೆಯನ್ನು ಅರಿತು ಆ ಭಾಗದ ಹಲವಾರು ಹಳ್ಳಿಗಳ ಪ್ರವಾಸ ಮಾಡಿದ್ದೆ. ಎಲ್ಲಾ ಕಡೆ ಅಭೂತಪೂರ್ವ ಸ್ವಾಗತ ನೀಡುವ ಜೊತೆಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಪಕ್ಷದ ಹೈಕಮಾಂಡ್ ಕೂಡ ನನಗೆ ಅಲ್ಲಿ ಕೆಲಸ ಮಾಡುವಂತೆ ಸೂಚಿಸಿತ್ತು. ಹಾಗಾಗಿ ನಾನು ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕೆಲವೊಮ್ಮೆ ಇಂತಹ ಸನ್ನಿವೇಶಗಳು ಉದ್ಭವವಾಗುತ್ತವೆ. ಹಾಗಂತ ಪಕ್ಷದ ವಿರುದ್ಧ ನಾವು ಹೋಗುವುದು ಸರಿಯಲ್ಲ ಎಂದು ಹೇಳಿದರು.

ನಾನು ಈಗಾಗಲೇ 80ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಬಿಜೆಪಿ ಅಧಿಕಾರಕ್ಕೆ ತರಬೇಕು ಎಂಬ ಆಸೆ ಮತದಾರರಲ್ಲಿ ಇದ್ದು, ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ನಾನು ಎಲ್ಲಿಗೂ ಪಲಾಯನ ಮಾಡಿಲ್ಲ, ಇಲ್ಲೇ ಇದ್ದೇನೆ. ಚುನಾವಣೆ ಮುಗಿಯುವವರೆಗೂ ಇಲ್ಲೇ ಇದ್ದು ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಹೇಳಿದರು.

ಟಿಕೆಟ್ ಕೈ ತಪ್ಪಲು ಕೆಲವರು ಪಿತೂರಿ ಮಾಡಿದ್ದಾರೆ ಎನ್ನುವುದನ್ನು ನಾನು ಒಪ್ಪಲಾರೆ. ಇದು ಪಕ್ಷದ ತೀರ್ಮಾನ. ಅದಕ್ಕೆ ಬದ್ದರಾಗಬೇಕು. ನಾನು ಓರ್ವ ಸಾಮಾನ್ಯ ಕಾರ್ಯಕರ್ತ. ನಾನು ಯಾರ ಮೇಲೂ ಟಿಕೆಟ್‍ಗಾಗಿ ಒತ್ತಡ ತಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News