ನಾನು ಶಾಸಕನಾಗಿ ಸಂಪಾದಿಸಿದ್ದು ಹಣವಲ್ಲ ಜನರ ಪ್ರೀತಿ: ಶಾಸಕ ವೈಎಸ್‍ವಿ ದತ್ತ

Update: 2018-04-24 16:38 GMT

ಕಡೂರು, ಎ.24:  ಕಳೆದ 12 ವರ್ಷಗಳಿಂದಲೂ ಕಡೂರು ಕ್ಷೇತ್ರದ ಜನರ ಪ್ರೀತಿ, ವಾತ್ಸಲ್ಯವೇ ನನ್ನ ಸಂಪತ್ತು ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು. 

ಅವರು ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಮಂಗಳವಾರ ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿನ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿದರು.  

ಕಳೆದ 60 ವರ್ಷಗಳ ಕಡೂರು ಕ್ಷೇತ್ರದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಇಂತಹ ಜನಸ್ತೋಮವನ್ನು ಯಾರೂ ಕಂಡಿರಲಿಲ್ಲ. ಇದೊಂದು ಇತಿಹಾಸದ ಪುಟಕ್ಕೆ ಸೆರಿದ ದಾಖಲೆಯಾಗಿದೆ. ಜಾತಿ, ಹಣಬಲವಿಲ್ಲದ ಸಾಮಾನ್ಯರಲ್ಲಿ ಸಾಮಾನ್ಯನಾಗಿರುವ ತನ್ನನ್ನು ಬೆಂಬಲಿಸಿ ಸೇರಿದ್ದ ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಭಾವುಕರಾಗಿ ಹೇಳಿದರು. 

ಕ್ಷೇತ್ರಕ್ಕೆ ಶಾಸಕನಾಗಿ ಗ್ರಾಮೀಣ ರಸ್ತೆಗಳ ಸುಧಾರಣೆ ಮತ್ತು ನೀರಾವರಿ ಯೋಜನೆಗೆ ಹೆಚ್ಚಿನ ಅಧ್ಯತೆ ನೀಡಿದ್ದೇನೆ. ಭದ್ರಾ ಮೇಲ್ದಾಂಡೆ ಯೋಜನೆಯಿಂದ ಈಗಾಗಲೇ 32 ಕೆರೆ ತುಂಬಿಸುವ ಕೆಲಸ ಆರಂಭವಾಗಿದೆ. ಮುಂದಿನ ದಿನಗಳಲ್ಲಿ 108 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಿದ್ದೇನೆ ಎಂಬ ಭರವಸೆ ನೀಡಿದರು. 

ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾದರೆ ಗೋಂದಿ ಅಣೆಕಟ್ಟಿನಿಂದ ಮದಗದಕೆರೆ, ಅಯ್ಯನಕೆರೆ ಸೇರಿದಂತೆ ಸರಣಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮೊದಲ ಅಧ್ಯತೆ ನೀಡುತ್ತೇನೆ. ಗ್ರಾಮೀಣ ಭಾಗವು ಸೇರಿದಂತೆ ಪಟ್ಟಣಗಳಲ್ಲಿನ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಸಣ್ಣ ಕೈಗಾರಿಕೆಗಳು ಮತ್ತು ಗಾರ್ಮೆಂಟ್ ಫ್ಯಾಕ್ಟರಿಗಳನ್ನು ಕ್ಷೇತ್ರದಲ್ಲಿ ಸ್ಥಾಪಿಸಿ ಉದ್ಯೋಗ ನೀಡುತ್ತೇನೆ. ವಸತಿ ರಹಿತರಿಗೆ ಹಳ್ಳಿಗಳಲ್ಲಿ ಜಮೀನುಗಳನ್ನು ಖರೀದಿಸಿಯಾದರು ನಿವೇಶನ ನೀಡಿ ಮನೆ ಕಟ್ಟಿಸಿಕೊಳ್ಳಲು ಅಧ್ಯತೆ ನೀಡುತ್ತೇನೆ. ಜೊತೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರು ನೀಡುವ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಸಹ ಪ್ರಾಸ್ತಪಿಸಿದರು. 

ಶಾಸಕ ದತ್ತ ಅವರ ಮೆರವಣಿಗೆ ಸಾರ್ವಜನಿಕ ಆಸ್ಪತ್ರೆ ಎದುರು ಸಾಗುವಾಗ ಅಭಿಮಾನಿಯೊಬ್ಬ ತುಂಬಿದ ಕೊಡದಲ್ಲಿ ಹಾಲನ್ನು ತಂದು ದತ್ತರವರಿಗೆ ಕ್ಷೀರಾಭಿಷೇಕ ಮಾಡಿದಾಗ ಸೇರಿದ್ದ ಜನಸ್ತೋಮದ ಹರ್ಷೋದ್ಗಾರ ಮುಗಿಲು ಮಟ್ಟಿತು. ಮೆರವಣಿಗೆಯಲ್ಲಿ ಜೆಡಿಎಸ್ ಪಕ್ಷದ ತಾ.ಅಧ್ಯಕ್ಷ ಮಹೇಶ್ವರಪ್ಪ, ನಗರ ಘಟಕದ ಅಧ್ಯಕ್ಷ ಭಂಡಾರಿಶ್ರೀನಿವಾಸ್, ಪುರಸಭೆ ಕಾಂಗ್ರೆಸ್ ಸದಸ್ಯ ಕೋಳಿ ಲೋಕೇಶ್, ಬಿದರೆ ಜಗದೀಶ್, ಸಿಗೇಹಡ್ಲು ಹರೀಶ್,ಬಿ.ಟಿ.ಗಂಗಾಧರನಾಯ್ಕ, ಕೆ.ಟಿ.ರವಿಶಂಕರ್, ಶೂದ್ರಶ್ರೀನಿವಾಸ್, ಕುಪ್ಪಾಳು ರೇಣುಕಾರಾಧ್ಯ, ಬೀರೂರು ನಗರಪುರಸಭೆ ಸದಸ್ಯೆ ವಸಂತರಾಮ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News