×
Ad

ತರೀಕೆರೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಂ.ನಾಗರಾಜ್ ನಾಮಪತ್ರ ಸಲ್ಲಿಕೆ

Update: 2018-04-24 22:16 IST

ತರೀಕೆರೆ, ಎ.24: ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಈ ರಾಜ್ಯದ ಜನತೆಗೆ ನೀಡಿದ ಅಭಿವೃದ್ಧಿ ಪರವಾದ ಹಲವಾರು ಯೋಜನೆಗಳು ಇಂದು ದೀನ ದಲಿತರ ಪರವಾಗಿದ್ದು, ಹರಿಜನ ಗಿರಿಜನರ ಅಭಿವೃದ್ಧಿಯಾಗಲು ಸಾಧ್ಯವಾಗಿದೆಯೆಂದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿರುವ ಮಾಜಿ ಶಾಸಕ ಹಾಗೂ ಅಭ್ಯರ್ಥಿ ಎಸ್.ಎಂ.ನಾಗರಾಜ್ ಹೇಳಿದರು. 

ಮಂಗಳವಾದ ಅವರು ತಮ್ಮ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪಟ್ಟಣದ ಚುನಾವಣಾಧಿಕಾರಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಸಾಮಾಜಿಕ ಪರಿವರ್ತನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚು ಒತ್ತು ಕೊಟ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇದು ಹಿಂದುಳಿದ , ದಲಿತ, ಅಲ್ಪಸಂಖ್ಯಾತರು ಆರ್ಥಿಕವಾಗಿ ಸಬಲರಾಗಿ ಬೆಳಯಲು ಸಹಕಾರಿಯಾಗಿದೆ ಎಂದರು.

ಕಳೆದ 24 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ನಾನು ಕೆಲಸ ಮಾಡಿರುತ್ತೇನೆ. ಯಾವುದೇ ಸಂದರ್ಭದಲ್ಲೂ ವಿಚಲಿತನಾಗದೆ ಪಕ್ಷದ ಪ್ರತಿಯೊಬ್ಬರೊಂದಿಗೆ ಬೆರೆತು ಆಯಾ ಸಂದರ್ಭಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತ್, ಪುರಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ನ ಸ್ಥಳೀಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪ್ರಮಾಣೀಕ ಪ್ರಯತ್ನ ಮಾಡಿರುತ್ತೇನೆ ಎಂದ ಅವರು, ಕಳೆದ ಚುನಾವಣೆಯಲ್ಲಿ ನನ್ನ ಮಗ ಲೊಹಿತ್‍ನನ್ನು ಕಸಬಾ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ಮುಂದಾದಾಗ ಮಗ ಲೋಹಿತ್ ಜಿಲ್ಲಾ ಪಂಚಾಯತ್ ನಲ್ಲಿ ಗೆದ್ದರೆ ನನ್ನ ಪ್ರಾಬಲ್ಯ ಕ್ಷೇತ್ರ ಮತ್ತು ರಾಜ್ಯದ ವರಿಷ್ಠರಲ್ಲಿ ಕಡಿಮೆಯಾಗಲಿದೆಂದು ಭಾವಿಸಿ ನನ್ನ ಮಗನ ಸೋಲಿಗೆ ಪ್ರಮುಖ ಕಾರಣರಾದವರು ಶಾಸಕ ಜಿ.ಎಚ್.ಶ್ರೀನಿವಾಸ್ ಎಂದರು ಆರೋಪಿಸಿದರು. 

ಶ್ರೀನಿವಾಸ ಚುನಾವಣೆಗೆ ನಿಂತಾಗ ತಾಲೂಕಿನ ಕೆಲವು ಗ್ರಾಮಗಳು ಶ್ರೀನಿವಾಸ್‍ಗೆ ಪರಿಚಯವೇ ಇರಲಿಲ್ಲ, ಯಾವ ಗ್ರಾಮದಲ್ಲಿ ಯಾವ ಜಾತಿ ಜನಾಂಗದವರು ಇದ್ದಾರೆಂದು ಗೊತ್ತಿರಲಿಲ್ಲ. ಇಂದು ಶ್ರೀನಿವಾಸ್‍ಗೆ ಪಕ್ಷದ ಟಿಕೆಟು ಕೈತಪ್ಪಿದರಿಂದ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಹಿಂದೆ ಇವರ ಗೆಲುವಿಗಾಗಿ ನಾವು ಬಹಳಷ್ಟು ಶ್ರಮಿಸಿದ್ದೇವೆಂದು ತಿಳಿಸಿದರಲ್ಲದೆ, ಪಕ್ಷದಿಂದ ಗೆಲುವು ಸಾಧಿಸಿ ಅಧಿಕಾರ ಅನುಭವಿಸಿ ಸಿದ್ದರಾಮಯ್ಯ ನವರ ಮೇಲೆ ಇದೀಗ ಆರೋಪ ಮಾಡುವುದು ಶ್ರೀನಿವಾಸ್‍ಗೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಇಂದು ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಐದಾರು ಜನ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ನನಗೆ ಆಯ್ಕೆ ಮಾಡಿ ಸ್ಪರ್ಧೆ ಮಾಡಲು ಟಿಕೇಟು ನೀಡಿದೆ. ಉಳಿದವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವು ಸಾಧಿಸಲು ಪ್ರಯತ್ನ ಪಡುತ್ತೇನೆ. 

ಇಂದು ಅಪಾರ ಬೆಂಬಲಿಗರೊಂದಿಗೆ ನಾಮ ಪತ್ರ ಸಲ್ಲಿಸಿರುತ್ತೇನೆ. ಗೆಲುವು ದೊರೆಯಬಹುದೆಂಬ ನಿರೀಕ್ಷೆ ನನ್ನದಾಗಿದೆ. ನಾಮ ಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಟಿ.ವಿ ಶಿವಶಂಕರಪ್ಪ, ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮ ಚಂದ್ರಪ್ಪ, ಶ್ರೀಮತಿ ಪುಷ್ಪನಾಗರಾಜ್, ಪುತ್ರಿ ಶ್ರೀಮತಿ ಐಶ್ವರ್ಯ, ಶ್ರೀಮತಿ ರಾಗಿಣಿ ಲೋಹಿತ್, ಕೆ.ಆರ್. ಕೆ.ಆರ್.ದೃವಕುಮಾರ್ ಮಾಜಿ ಪುರಸಭೆ ಅಧ್ಯಕ್ಷ ಧರ್ಮರಾಜ್ ಪುರುಷೋತ್ತಮ ಹಾಗೂ ಮುಖಂಡರು ಹಾಜರಿದ್ದರು. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News