ಶಾಸಕ ನರೇಂದ್ರರ ಮೇಲಿನ ಆರೋಪ ಸತ್ಯಕ್ಕೆ ದೂರ: ಹನೂರು ತಾಪಂ ಅಧ್ಯಕ್ಷ ಆರ್.ರಾಜು

Update: 2018-04-24 17:00 GMT

ಹನೂರು,ಎ.24 : ಜೆಡಿಎಸ್ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಅವರು ಶಾಸಕ ಆರ್.ನರೇಂದ್ರ ಅವರನ್ನು ಕ್ಷೇತ್ರದಲ್ಲಿ ದಲಿತರ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದುದು ಎಂದು ತಾಪಂ ಅಧ್ಯಕ್ಷ ಆರ್.ರಾಜು ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊನ್ನಾಚಿ ಮಹದೇವಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದು, ಅವರಿಂದ ಮತ ಪಡೆದುಕೊಂಡ ಶಾಸಕರು ದಲಿತರ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದುದು ಎಂದರು. 

ಶಾಸಕ ಆರ್.ನರೇಂದ್ರ ಅವರು ಕಳೆದ 10 ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಜತೆಗೆ ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನವನ್ನು ತರುವುದರ ಮೂಲಕ ವಿವಿಧ ಸಮುದಾಯದ ಜನತೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಈ ದಿಸೆಯಲ್ಲಿ ದಲಿತ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಅದರಲ್ಲಿ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿ ರಾಜ್ಯದಲ್ಲಿಯೇ ಹೆಚ್ಚು ಅನುದಾನ ಬಳಕೆ ಮಾಡಿಕೊಳ್ಳವುದರ ಮೂಲಕ ದಲಿತರ ಕಾಲನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಮೂಲ ಸೌಕರ್ಯವನ್ನು ಒದಗಿಸಲಾಗಿದೆ. ಜತೆಗೆ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಸಮುದಾಯ ಜನರಿಗೆ ಹಲವು ಸೌಕರ್ಯವನ್ನು ಕಲ್ಪಿಸಲಾಗಿದೆ. ದಲಿತರ ಅಭಿವೃದ್ಧಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ನಿಗಮದ ವತಿಯಿಂದ ಮನೆ ಮಂಜೂರು, ಗಂಗಕಲ್ಯಾಣ ಯೋಜನೆಯಡಿ ಕೊಳವೆಬಾವಿ, ವಸತಿ ಶಾಲೆಗಳ ಸ್ಥಾಪನೆ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅಲ್ಲದೇ ದಲಿತರಿಗೆ ವಿವಿಧ ಸ್ಥಾನಮಾನಗಳನ್ನು ನೀಡಲಾಗಿದೆ. ಹೀಗಿರುವಾಗ ದಲಿತರ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಹೇಳಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪೊನ್ನಾಚಿ ಮಹದೇವಸ್ವಾಮಿ ವಿರುದ್ಧ ಹರಿಹಾಯ್ದರು. 

ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಬಸವರಾಜು, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ಕಂಠೀರವ ಸ್ಟುಡಿಯೋ ನಿರ್ದೇಶಕ ಪುಟ್ಟರಾಜು, ಸಿಂಗನಲ್ಲೂರು ದೇವರಾಜು ,ಮುಖಂಡರಾದ ನಾಗಣ್ಣ, ಕಿರಣ್, ಪ್ರಸನ್ನ, ಸುದೇಶ್ ಹಾಗೂ ಇನ್ನಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News