ಮಡಿಕೇರಿ: ಸೊಸೆಯ ಮೇಲೆಯೇ ಬಂದೂಕಿನಿಂದ ಗುಂಡು ಹಾರಿಸಿದ ವ್ಯಕ್ತಿ

Update: 2018-04-24 17:16 GMT

ಮಡಿಕೇರಿ,ಎ.24: ತನ್ನ ಸೊಸೆಯ ಮೇಲೆಯೇ ಮಾವನೋರ್ವ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ಕಳೆದ ರಾತ್ರಿ ಮದೆನಾಡುವಿನಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಮಹಿಳೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮದೆನಾಡುವಿನ ನಿವೃತ್ತ ಯೋಧ ಚಂಗಪ್ಪ ಎಂಬವರೇ ತಮ್ಮ ಸೊಸೆ ಸರಿತಾ (38) ಎಂಬರ ಮೇಲೆ ಗುಂಡು ಹಾರಿಸಿದ ವ್ಯಕ್ತಿ. ರಾತ್ರಿ ಸುಮಾರು 8 ಗಂಟೆ ವೇಳೆಗೆ ಸರಿತಾ ಅವರ ಪತಿ ಸ್ನಾನಕ್ಕೆ ತೆರಳಿದ್ದ ಸಂದರ್ಭ ಎಸ್‍ಬಿಬಿಎಲ್ ಬಂದೂಕಿನಿಂದ ಚಂಗಪ್ಪ ಸರಿತಾ ಅವರ ಬೆನ್ನಿನ ಬಲಭಾಗಕ್ಕೆ ಎರಡು ಬಾರಿ ಗುಂಡು ಹಾರಿಸಿದ್ದಾರೆ. ಆತ ಮೂರನೇ ಬಾರಿ ಗುಂಡು ಹಾರಿಸಲು ಪ್ರಯತ್ನಿಸಿದಾಗ ಸ್ನಾನದ ಕೋಣೆಯಿಂದ ಹೊರಬಂದ ಪುತ್ರ ಶ್ಯಾಂಸುಂದರ್ ತನ್ನ ತಂದೆಯನ್ನು ತಡೆದಿದ್ದು, ಆಗ ನಡೆದ ತಳ್ಳಾಟದಲ್ಲಿ ಆರೋಪಿ ಚಂಗಪ್ಪ ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭ ಚಂಗಪ್ಪ ಅವರ ತಲೆಯ ಭಾಗಕ್ಕೂ ಗಾಯವಾಗಿದ್ದು, ಇಬ್ಬರನ್ನೂ ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಸರಿತಾ ಅವರನ್ನು ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. ಸರಿತಾ ತನ್ನ ವಿರುದ್ಧ ಪುತ್ರನ ಬಳಿ ಇಲ್ಲಸಲ್ಲದ ದೂರು ನೀಡುತ್ತಿದ್ದಳೆಂಬ ಕಾರಣಕ್ಕೆ ಚಂಗಪ್ಪ ಗುಂಡು ಹಾರಿಸಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಸರಿತಾ ಅವರ ಪತಿ ಶ್ಯಾಂಸುಂದರ್ ಅವರಿಂದ ದೂರು ಸ್ವೀಕರಿಸಿರುವ ಗ್ರಾಮಾಂತರ ಠಾಣಾ ಪೊಲೀಸರು ಬಂಗಪ್ಪ ಅವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News