ಪ್ಯಾರಾ ಈಜು ಪಟು ಗೋಪಿಚಂದ್‌ಗೆ ಎಎಂಎಫ್ ನಿಂದ ಸನ್ಮಾನ; 2020 ರ ಪ್ಯಾರಾಲಿಂಪಿಕ್‌ಗೆ ಪ್ರಾಯೋಜಕತ್ವ

Update: 2018-04-24 17:24 GMT

ಬೆಂಗಳೂರು, ಎ.24: ಕರ್ನಾಟಕದ ಪ್ರತಿಭಾವಂತ ಪ್ಯಾರಾ ಈಜು ಪಟು ಗೋಪಿಚಂದ್‌ರನ್ನು ಆದಿತ್ಯ ಮೆಹ್ತಾ ಪ್ರತಿಷ್ಠಾನ(ಎಎಂಎಫ್)ದಿಂದ ಸನ್ಮಾನಿಸಲಾಯಿತು. ಅಲ್ಲದೆ, ಮುಂದಿನ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವೃತ್ತಿ ಜೀವನ ಮುಂದುವರಿಸಲು ಅಗತ್ಯವಿರುವ ಎಲ್ಲ ನೆರವನ್ನು ನೀಡಾಗುತ್ತದೆ ಎಂದು ಘೋಷಣೆ ಮಾಡಿದೆ.

ಗೋಪಿಚಂದ್ 2016-2017 ಮತ್ತು 2017-18 ರಲ್ಲಿ ಪ್ಯಾರಾ ಈಜು ಚಾಂಪಿಯನ್ ಶಿಪ್‌ನಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಆತನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ 7.50 ಲಕ್ಷ ರೂ. ಬೆಲೆಯ ಅಂಗಾಂಗವನ್ನು ದಾನವಾಗಿ ನೀಡಿದೆ. ಅಲ್ಲದೆ, ಟೋಕಿಯೊದಲ್ಲಿ 2020 ರಲ್ಲಿ ನಡೆಯುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಅಗತ್ಯವಿರುವ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

ಉದಯ್‌ಪುರದಲ್ಲಿ 2017-18 ರಲ್ಲಿ ನಡೆದಿದ್ದ ಪ್ಯಾರಾ ಈಜು ಚಾಂಪಿಯನ್ ಶಿಪ್‌ನಲ್ಲಿ ಗೋಪಿಚಂದ್ ಮೂರು ಸ್ವರ್ಣ ಹಾಗೂ ವೈಯಕ್ತಿಕ ಟ್ರೋಫಿ ಸಂಪಾದಿಸಿ ಸಾಮರ್ಥ್ಯದ ಛಾಪು ಮೂಡಿಸಿದ್ದರು. 2016-17 ರಲ್ಲಿ ಜೈಪುರದಲ್ಲಿ ನಡೆದಿದ್ದ ಪ್ಯಾರಾ ಈಜು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕಿರಿಯ ಈಜುಪಟು ಮೂರು ಚಿನ್ನ ಗೆದ್ದಿದ್ದರು. 2016-17 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಗೋಪಿಚಂದ್ ಒಂದು ಸ್ವರ್ಣ ಹಾಗೂ ಮೂರು ಬೆಳ್ಳಿಪದಕ ಪಡೆದುಕೊಂಡಿದ್ದರು.

ಮೆಹ್ತಾ ಪ್ರತಿಷ್ಠಾನದ ನಿರ್ದೇಶಕ ಗಂಗಾಧರ ಬಲಿಜಾ ಮಾತನಾಡಿ, ವಿಶಿಷ್ಟ ಚೇತನ ಕ್ರೀಡಾಪಟುಗಳ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ನಾವು ಮುಂದಿದ್ದೇವೆ. ಗೋಪಿಚಂದ್ ಅತ್ಯುತ್ತಮ ಪ್ರತಿಭೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪಡೆದಿದ್ದಾರೆ. ಆದರೆ, ಸರಿಯಾದ ಬೆಂಬಲ ಸಿಗದಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಯಲು ಸಾಧ್ಯವಾಗಿಲ್ಲ. ಹೀಗಾಗಿ, ನಾವು ನಮ್ಮ ಸಂಸ್ಥೆಯಿಂದ ಸಹಾಯ ಮಾಡಲು ನೆರವಾಗುತ್ತಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News