ತಪ್ಪಿದ ಬಿಜೆಪಿ ಟಿಕೆಟ್: ಲಕ್ಷ್ಮಣ್‍ ಕುಮಾರ್ ಕಾಂಗ್ರೆಸ್ ಸೇರ್ಪಡೆ

Update: 2018-04-24 17:47 GMT

ಮದ್ದೂರು, ಎ.24: ಬಿಜೆಪಿ ಟಿಕೆಟ್ ತಪ್ಪಿದ್ದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ಮಣ್ ಮಾರ್ ತನ್ನ ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು ಮಾದೇಗೌಡರ ನೇತೃತ್ವದಲ್ಲಿ ಮಂಗಳವಾರ ಕಾಂಗ್ರೆಸ್‍ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್‍ಕುಮಾರ್, ನಾನು 2 ವರ್ಷಗಳಿಂದ ತಾಲೂಕಿನ 257 ಬೂತ್‍ಗಳಲ್ಲಿ ತಳಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದೆ. ಆದರೆ, ಟಿಕೆಟ್ ನೀಡದೆ ಮೋಸ ಮಾಡಿದರು ಎಂದು ಕಿಡಿಕಾರಿದರು.

ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಉದ್ದೇಶದಿಂದ ಒಳಒಪ್ಪಂದ ಮಾಡಿಕೊಂಡು ನಿಷ್ಠಾವಂತನಾದ ನನಗೆ ಬಿಜೆಪಿ ಟಿಕೆಟ್ ತಪ್ಪಿಸಿದೆ ಎಂದು ಆರೋಪಿಸಿದ ಅವರು, ಬೆಂಬಲಿಗರ ಜತೆ ಚರ್ಚಿಸಿ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು. 

ಮಧು ಮಾದೇಗೌಡ ಮಾತನಾಡಿ, ಲಕ್ಷ್ಮಣ್‍ಕುಮಾರ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಿದೆ. ಇವರನ್ನು ಹಾಗೂ ಬೆಂಬಲಿರನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್,  ಜಿಪಂ ಸದಸ್ಯ ರಾಜೀವ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ಮುಖಂಡರಾದ ವಿ.ಕೆ.ಜಗದೀಶ್, ಟೈರ್‍ಗಿರಿ, ದಾಕ್ಷಾಯಿಣಿ, ಲಕ್ಷ್ಮಣ್, ಚಾಕನಕೆರೆ ಕುಮಾರ್, ಯೋಗನಂದ, ಶಶಿಧರ್, ಸಿದ್ದು, ಇತರ ಮುಖಂಡರು ಉಪಸ್ಥಿತರಿದ್ದರು.

ಕಾಂಗ್ರೆಸ್ ಕಚೇರಿಯಾದ ಬಿಜೆಪಿ ಕಚೇರಿ!

ಪಟ್ಟಣದ ಬಿಜೆಪಿ ತಾಲೂಕು ಕಚೇರಿಯಲ್ಲಿಯೇ ಲಕ್ಷ್ಮಣ್‍ಕುಮಾರ್ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಂತೆ, ಮೂರು ವರ್ಷದಿಂದ ಕಚೇರಿ ಎದುರು ರಾರಾಜಿಸುತ್ತಿದ್ದ ಬಿಜೆಪಿ ಪಕ್ಷದ ನಾಮಫಲಕವನ್ನು ತೆರವುಗೊಳಿಸಿ ಕಾಂಗ್ರೆಸ್ ಪಕ್ಷದ ನಾಮಫಲಕ ಅಳವಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News