ದಾವಣಗೆರೆ ಉತ್ತರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಸ್.ಎ.ರವೀಂದ್ರನಾಥ್ ನಾಮಪತ್ರ ಸಲ್ಲಿಕೆ

Update: 2018-04-24 18:05 GMT

ದಾವಣಗೆರೆ,ಎ.24: ನಾವು ಅಧಿಕಾರಕ್ಕೆ ಬಂದರೆ ದಾವಣಗೆರೆಯನ್ನು ಸ್ವಚ್ಛ ನಗರಿಯನ್ನಾಗಿ ರೂಪಿಸುತ್ತೇವೆಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ.ರವೀಂದ್ರನಾಥ್ ತಿಳಿಸಿದರು.

ನಗರದ ನಿಟ್ಟುವಳ್ಳಿ ದುರ್ಗಾಂಭಿಕಾ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ, ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಪಾಲಿಕೆಗೆ ಆಗಮಿಸಿ ನಾಮಪತ್ರದ 2ನೇ ಸೆಟ್ ಸಲ್ಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಸಕ ಶಾಮನೂರು ಶಿವಶಂಕರಪ್ಪನವರೇ ಒಳ್ಳೆ ಕೆಲಸಗಳಾಗಿಲ್ಲ ಎಂಬ ಅತೃಪ್ತಿಯನ್ನು ಪಾಲಿಕೆ ಸಭೆಯಲ್ಲಿ ಹೊರ ಹಾಕಿದ್ದರು. ಹೀಗಾಗಿ ನಾಲ್ಕು ಸಿಸಿ ರಸ್ತೆ ನಿರ್ಮಿಸಿ, ನಾಲ್ಕು ಲೈಟ್ ಹಾಕುವುದು ಮಾತ್ರ ಅಭಿವೃದ್ಧಿ ಕೆಲಸವಲ್ಲ ಎಂದರು.

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಯಶವಂತ್‍ರಾವ್ ಜಾಧವ್ ಅವರೇ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯ ಸಂದರ್ಭ ಬಂಡಾಯ ಏಳುವುದು, ಪಕ್ಷಾಂತರ ಮಾಡುವುದು ಸಹಜ. ಯಾರು ಎಷ್ಟೇ ಬಂಡಾಯ ಎದ್ದರೂ, ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಾರೆ. ಇದಕ್ಕೆ ಇಂದು ಮಾಯಕೊಂಡದ ಅಭ್ಯರ್ಥಿ ಪ್ರೊ.ಎನ್.ಲಿಂಗಣ್ಣ ನಾಮಪತ್ರ ಸಲ್ಲಿಸುವಾಗ ಸೇರಿರುವ ಜನಸ್ತೋಮವೇ ಸಾಕ್ಷಿ ಎಂದು ಹೇಳಿದರು.

ದಿನದ 24 ಗಂಟೆ ನೀರು ಪೂರೈಸುವುದು, ಸ್ವಚ್ಛ ನಗರ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವ ಆಧಾರದಲ್ಲಿ ಮತ ಕೇಳುತ್ತೇವೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News