ಉ.ಪ್ರದೇಶ: ಜಾತಿ ಯಾವುದೆಂದು ಕೇಳಿ ದಲಿತ ಬಾಲಕಿಯನ್ನು ಕೊನೆಯ ಸಾಲಿನಲ್ಲಿ ಕೂರಿಸಿದ ಶಿಕ್ಷಕ

Update: 2018-04-25 06:44 GMT
ಸಾಂದರ್ಭಿಕ ಚಿತ್ರ

ಮುಝಫ್ಫರನಗರ, ಎ.25: ಹದಿಮೂರು ವರ್ಷದ ದಲಿತ ಬಾಲಕಿಯೊಬ್ಬಳಿಗೆ ಅವಳ ಜಾತಿ ಯಾವುದೆಂದು ಇಡೀ ತರಗತಿ ಮುಂದೆ ಹೇಳುವಂತೆ ಮಾಡಿದ ಶಿಕ್ಷಕನೊಬ್ಬ ನಂತರ ಆಕೆಯನ್ನು ಕೊನೆಯ ಸಾಲಿನ ಬೆಂಚಿನಲ್ಲಿ ಕೂರಿಸಿದ ಘಟನೆ ಉತ್ತರ ಪ್ರದೇಶದ ಮುಝಫ್ಫರನಗರ ಸನಾತನ ಧರ್ಮ ಇಂಟರ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಬಾಲಕಿ ಮೊದಲನೇ ಸಾಲಿನಲ್ಲಿ ಕುಳಿತಿದ್ದನ್ನು ಕಂಡ ಶಿಕ್ಷಕ ಮೇಲಿನಂತೆ ನಡೆದುಕೊಂಡಿದ್ದ. ಘಟನೆಯಿಂದ ತೀವ್ರ ನೊಂದ ಬಾಲಕಿ ಮನೆಗೆ ತೆರಳಿ ಹೆತ್ತವರಲ್ಲಿ ಈ ವಿಚಾರ ತಿಳಿಸಿದ್ದು, ಅವರು ಶಾಲೆಗೆ ಬಂದು ಪ್ರತಿಭಟನೆ ನಡೆಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಂತರ ಪೊಲೀಸ್ ದೂರು ದಾಖಲಿಸಿದ್ದರು. ಆಕೆ ಮತ್ತೆಂದೂ ಮೊದಲನೇ ಸಾಲಿನಲ್ಲಿ ಕುಳಿತುಕೊಳ್ಳಬಾರದೆಂದು ಹಾಗೂ ಹಾಗೇನಾದರೂ ಮಾಡಿದರೆ ಶಾಲೆಯಿಂದಲೇ ಹೊರಕಳುಹಿಸುವುದಾಗಿ ಶಿಕ್ಷಕರು ಬೆದರಿಸಿದ್ದರೆಂದು ಆಕೆಯ ಸಹಪಾಠಿಗಳು ತನಗೆ ತಿಳಿಸಿದ್ದಾರೆಂದು ಬಾಲಕಿಯ ತಂದೆ ಹೇಳಿಕೊಂಡಿದ್ದಾರೆ.

ಆದರೆ ಶಾಲಾ ಪ್ರಿನ್ಸಿಪಾಲ್ ರಜನಿ ಗೋಯೆಲ್ ಈ ಅರೋಪ ನಿರಾಕರಿಸಿದ್ದು, ವಿದ್ಯಾರ್ಥಿನಿ ತರಗತಿಯಲ್ಲಿ ಹರಟುತ್ತಿದ್ದುದನ್ನು ಕಂಡು ಶಿಕ್ಷಕ ಆಕೆಯನ್ನು ಕೊನೆಯ ಸಾಲಿನಲ್ಲಿ ಕೂರಿಸಿದ್ದರು. ಅಶಿಸ್ತು ತೋರುವ ವಿದ್ಯಾರ್ಥಿಗಳಿಗೆ ಇಂತಹ ಶಿಕ್ಷೆ ನೀಡಲಾಗುತ್ತದೆ ಎಂದು ಅವರು ಹೇಳಿದರು. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News