ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ, ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ಶಿವರಾಮಗೌಡ ಕಾಂಗ್ರೆಸ್ ಸೇರ್ಪಡೆ
ಕೊಪ್ಪಳ,ಎ.25: ಈ ಬಾರಿಯ ವಿಧಾನಸಭಾ ಚುನಾವಣೆಯ ಟಿಕೆಟ್ ಮತ್ತು ಪಕ್ಷದಲ್ಲಿ ಸ್ಥಾನಮಾನ ನೀಡದೇ ನಿರ್ಲಕ್ಷಿಸಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುದಾಗಿ ಪ್ರಬಲ ಟಿಕೆಟ್ ಆಕಾಂಕ್ಷಿ ಮಾಜಿ ಸಂಸದ ಶಿವರಾಮಗೌಡ ತಿಳಿಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರ ಪರ ರೋಡ್‍ಶೋನಲ್ಲಿ ಪಾಲ್ಗೊಂಡು ನಾಮಪತ್ರ ಸಲ್ಲಿಕೆವರೆಗೂ ಬಿಜೆಪಿಯಲ್ಲಿದ್ದು, ಏಕಾಏಕಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರನ್ನು ತಿಳಿಸಿದ ಅವರು, ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ನಾನೂ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೆ. ಬಿಜೆಪಿಯಲ್ಲೀಗ ಉಸಿರುಗಟ್ಟುವ ವಾತಾವರಣವಿದೆ. ನಿಷ್ಠಾವಂತಿಕೆಯಿಂದ ದುಡಿದರೂ ಸೂಕ್ತ ಸ್ಥಾನಮಾನ ನೀಡದೇ ತುಳಿತಕ್ಕೊಳಗಾಗಿದ್ದರಿಂದ ಪಕ್ಷದ ರಾಜ್ಯಧ್ಯಕ್ಷ ಯಡಿಯೂರಪ್ಪ ಹಾಗೂ ರಾಷ್ಟ್ರೀಯಾಧ್ಯಕ್ಷ ಅಮಿತ್‍ಶಾ ಅವರಿಗೆ ಮನವರಿಕೆ ಮಾಡಿದ್ದೆ. ಆದರೂ ಕ್ಯಾರೆ ಎನ್ನಲಿಲ್ಲ. ಹೀಗಾಗಿ ಬೇಸರಗೊಂಡು ಸಿ.ಎಂ. ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದು, ಪಕ್ಷ ಸೇರ್ಪಡೆಗೆ ಸ್ವಾಗತ ಕೋರಿದ್ದಾರೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ರಾಯಣ್ಣ ಬ್ರಿಗೇಡ್‍ನ ಕೆ. ವಿರೂಪಾಕ್ಷಪ್ಪ ಜೊತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳು ಮತ್ತು ಸಿ.ಎಂ. ಸಿದ್ದರಾಮ್ಯನವರ ಜನಪರ ಯೋಜನೆಗಳನ್ನು ಜನತೆಗೆ ತಿಳಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರಲ್ಲದೇ, ರಾಜಕೀಯದಲ್ಲಿ ಯಾರೂ ಮಿತ್ರರಲ್ಲ ಶತ್ರುಗಳೂ ಅಲ್ಲ. ಮುಂಬರುವ ದಿನಗಳಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಿ.ಎಂ. ಸಿದ್ದಮಯ್ಯನವರೊಂದಿಗೆ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಾಸಕರಾದ ಶಿವರಾಜ ತಂಗಡಗಿ, ಹಂಪನಗೌಡ ಬಾದರ್ಲಿ, ಎನ್.ಎಸ್. ಬೋಸ್‍ರಾಜ್, ಪ್ರತಾಪಗೌಡ, ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ, ನೆಕ್ಕಂಟಿ ಸೂರಿಬಾಬು, ರಾಯಚೂರು ಜಿ.ಪಂ ಮಾಜಿ ಅಧ್ಯಕ್ಷ ದೊಡ್ಡಬಸವರಾಜ ಸೇರಿದಂತೆ ಇನ್ನಿತರರಿದ್ದರು.