ರಾಜ್ಯದಲ್ಲಿ ಈ ಬಾರಿ ಎಷ್ಟು ಕೋಟಿ ಮತದಾರರಿದ್ದಾರೆ ಗೊತ್ತೇ?
ಬೆಂಗಳೂರು, ಎ.25: 2018ರ ವಿಧಾನಸಭಾ ಚುನಾವಣೆಗೆ ಎ.14ರೊಳಗೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಒಟ್ಟು ಮತದಾರರ ಸಂಖ್ಯೆ 5.10 ಕೋಟಿ ಆಗಲಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದ್ದಾರೆ.
ಫೆ.28 ಕ್ಕೆ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿ ಪ್ರಕಾರ 4.94 ಕೋಟಿ ಮತದಾರರು ಇದ್ದರು. ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಎ.14 ರವರೆಗೆ ಅವಕಾಶ ನೀಡಲಾಗಿತ್ತು. ಅದರಲ್ಲಿ 13.46 ಲಕ್ಷ ಅರ್ಜಿಗಳು ಸ್ವೀಕಾರಗೊಂಡಿದ್ದು, ಆ ಪೈಕಿ 66 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 12.02 ಲಕ್ಷ ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದು, 77 ಸಾವಿರ ಅರ್ಜಿಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.
ಉಳಿದಂತೆ ಫಾರಂ 7 ರಡಿ 2.22 ಲಕ್ಷ ಅರ್ಜಿಗಳು ಬಂದಿದ್ದು, 8 ಸಾವಿರ ಅರ್ಜಿಗಳನ್ನು ತಿರಸ್ಕರಿಸಿ 2.08 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಫಾರಂ-8 ರಡಿ 2.8 ಲಕ್ಷ ಅರ್ಜಿಗಳು ಬಂದಿದ್ದು, 2 ಸಾವಿರ ಅರ್ಜಿಗಳನ್ನು ತಿರಸ್ಕರಿಸಿ 1.93 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 12 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಪಾರಂ-8 ಎ ಅಡಿ 57 ಸಾವಿರ ಅರ್ಜಿಗಳು ಬಂದಿದ್ದು, ಒಂದು ಸಾವಿರ ಅರ್ಜಿಗಳನ್ನು ತಿರಸ್ಕರಿಸಿ 50 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 6 ಸಾವಿರ ಅರ್ಜಿಗಳು ಬಾಕಿ ಉಳಿದಿವೆ ಎಂದು ಅವರು ಮಾಹಿತಿ ನೀಡಿದರು.