×
Ad

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನಾಟಕವಾಡುತ್ತಿದ್ದಾರೆ: ಮೈಸೂರಿನಲ್ಲಿ ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ

Update: 2018-04-25 21:16 IST

ಮೈಸೂರು,ಎ.25: ದಲಿತ, ಹಿಂದುಳಿದ, ಆದಿವಾಸಿ, ಅಲ್ಪಸಂಖ್ಯಾತ, ರೈತ, ಸಣ್ಣ ವ್ಯಾಪಾರಿಗಳ ಹಿತ ಕಾಯುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸೋತಿವೆ ಎಂದು ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ವಾಗ್ದಾಳಿ ನಡೆಸಿದರು.

ನಗರದ ಮಹರಾಜ ಕಾಲೇಜು ಮೈದಾನದಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ಜೆಡಿಎಸ್-ಬಿಎಸ್‍ಪಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 'ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ನಾನು ತಿನ್ನುವುದಿಲ್ಲ, ಬೇರೆಯವರು ತಿನ್ನಲಿ ಎಂಬ ನಾಟಕವಾಡುತ್ತಿದ್ದಾರೆ. ನೀರವ್ ಮೋದಿ, ಲಲಿತ್ ಮೋದಿಯಂತಹ ಭ್ರಷ್ಟಾಚಾರಿಗಳು ದೇಶದ ಸಂಪತ್ತನ್ನು ತಿಂದು ವಿದೇಶದಲ್ಲಿ ಮಜಾಮಾಡುತ್ತಿದ್ದಾರೆ. ಅದರ ಬಗ್ಗೆ ಮೋದಿ ಮಾತನಾಡುವುದಿಲ್ಲ. ಎಸ್ಸಿ ಎಸ್ಟಿ ಕಾಯ್ದೆ ದುರ್ಬಲ ತೀರ್ಪು ಜಾರಿಯಾದರೂ ಮಾತನಾಡುವುದಿಲ್ಲ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನೂ ಕೂಡ ಸಡಿಲಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಈ ದೇಶದ ಎಲ್ಲಾ ವರ್ಗಗಳ ಹಿತ ಕಾಯುವಲ್ಲಿ ವಿಫಲವಾಗಿವೆ. ದಲಿತರು ಅಲ್ಪಸಂಖ್ಯಾತರ ಪರ ಎಂದು ಹೇಳುತ್ತಿರುವ ಕಾಂಗ್ರೆಸ್, ಚುನಾವಣೆ ಸಂದರ್ಭದಲ್ಲಿ ಮಾತ್ರ ಆ ವರ್ಗಗಳ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ, ನಂತರ ಆ ವರ್ಗಗಳನ್ನು ನಿರ್ಲಕ್ಷಿಸುತ್ತಾರೆ ಎಂದು ಹೇಳಿದರು.
ಬಿಜೆಪಿಯವರು ಅಂಬೇಡ್ಕರ್ ಅವರಿಗೆ ಭಾರತ್ನ ನೀಡಿರುವುದಾಗಿ ಹೇಳುತ್ತಿದ್ದಾರೆ. ಇದು ಶುದ್ಧ ಸುಳ್ಳು. ವಿ.ಪಿ.ಸಿಂಗ್ ಪ್ರಧಾನಿ ಆಗಿದ್ದ ಸಂದರ್ಭದಲ್ಲೇ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲಾಗಿತ್ತು. ವಿ.ಪಿ.ಸಿಂಗ್ ಪ್ರಧಾನಿ ಆಗಲು ಬಿಎಸ್‍ಪಿ ಬೆಂಬಲ ನೀಡಿತ್ತು. ಆ ಸಂದರ್ಭದಲ್ಲಿ ನಾವು ಅವರಿಗೆ ಎರಡು ಷರತ್ತುಗಳನ್ನು ವಿಧಿಸಿದ್ದೆವು. ಒಂದು ಅಂಬೇಡ್ಕರ್ ಅವರ ಮಂಡಲ್ ಕಮೀಷನ್ ವರದಿ ಜಾರಿ ಮಾಡಬೇಕು, ಮತ್ತೊಂದು ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು. ಆಗ ವಿ.ಪಿ.ಸಿಂಗ್ ಪ್ರಧಾನಿ ಆದ ಬಳಿಕ ಎರಡನ್ನೂ ಮಾಡಿದರು ಎಂದು ತಿಳಿಸಿದರು.

ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ನಿರ್ಲಕ್ಷಿಸಿದ್ದವು. ಮಂಡಲ್ ಕಮಿಷನ್ ವರದಿ ಜಾರಿಮಾಡಲು ಕಾಂಗ್ರೆಸ್ ತಡೆ ನೀಡಿತ್ತು. ಕಾಂಗ್ರೆಸೇತರ ಸರಕಾರ ಭಾರತ ರತ್ನ ಹಾಗೂ ಮಂಡಲ್ ಕಮೀಷನ್ ವರದಿ ಜಾರಿ ಮಾಡಬೇಕಾಯಿತು ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಈ ದೇಶ ಕಂಡ ಅತ್ಯಂತ ಶ್ರೇಷ್ಟ ಮಹಿಳೆ ಮಾಯಾವತಿ. ಅಂತಹ ಹೆಣ್ಣುಮಗಳು ಈ ದೇಶದಲ್ಲಿ ಮತ್ತೊಮ್ಮೆ ಹುಟ್ಟಿಬರಲು ಸಾಧ್ಯವಿಲ್ಲ. ಬಿಎಸ್‍ಪಿ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಂಡು ದೇಶದಲ್ಲಿ ಬಿಜೆಪಿ ಕಾಂಗ್ರೆಸ್ ಕಿತ್ತೊಗೆಯುವ ಕೆಲಸ ಮಾಡುವುದಾಗಿ ಹೇಳಿದರು.

ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಎಸ್‍ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರ, ರಾಜ್ಯಸಭಾ ಸದಸ್ಯ ಡಾ.ಅಶೋಕ್ ಕುಮಾರ್ ಸಿದ್ಧಾರ್ಥ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ, ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News