×
Ad

ಟಿಕೆಟ್ ಹೈಡ್ರಾಮಕ್ಕೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯರ ಹೊಂದಾಣಿಕೆಯೇ ಕಾರಣ: ಕುಮಾರಸ್ವಾಮಿ ಹೊಸ ಬಾಂಬ್

Update: 2018-04-25 21:22 IST

ಮೈಸೂರು,ಎ.25: ವರುಣಾ ವಿಧಾಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿ ಟಿಕೆಟ್ ಹೈಡ್ರಾಮಾಕ್ಕೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಹೊಂದಾಣಿಕೆಯೇ ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ಮಹರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಜೆಡಿಎಸ್-ಬಿಎಸ್‍ಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ಎರಡು ದಿನ ನಡೆದ ಬಿಜೆಪಿ ಟಿಕೆಟ್ ನಾಟಕಕ್ಕೆ ಯಡಿಯೂರಪ್ಪ-ಸಿದ್ದರಾಮಯ್ಯರ ನಡುವಿನ ಹೊಂದಾಣಿಕೆಯೇ ಕಾರಣ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ ವರುಣಾದಲ್ಲಿ ಏಕೆ ಯಡಿಯೂರಪ್ಪ ತಮ್ಮ ಪುತ್ರನನ್ನು ನಿಲ್ಲಿಸಲಿಲ್ಲ ಎಂದು ಹರಿಹಾಯ್ದರು.

ನಮಗೆ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳು ಎದುರಾಳಿಗಳು. ನಾವು ಎರಡೂ ಪಕ್ಷಗಳನ್ನು ಎದುರಿಸುತ್ತೇವೆ. ಜೆಡಿಎಸ್-ಬಿಎಸ್‍ಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿನ್ನೆ ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇವೇಗೌಡ ಮುಖ್ಯಮಂತ್ರಿಗಳಾಗಿದ್ದಾಗ ಏಕೆ ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇವರೇ ಹಣಕಾಸಿನ ಸಚಿವರಾಗಿದ್ದರು. ಪಾಪ ಅದನ್ನು ಮರೆತು ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News