ಮುಳಬಾಗಿಲು ಶಾಸಕ ಮಂಜುನಾಥ್ ಎಸ್ಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಅಕ್ರಮ: ಹೈಕೋರ್ಟ್ ತೀರ್ಪು
ಬೆಂಗಳೂರು, ಎ.25: ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಿ.ಮಂಜುನಾಥ್ ಅವರು ಪರಿಶಿಷ್ಟ ಜಾತಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದನ್ನು ಅಕ್ರಮ ಎಂದು ಹೈಕೋರ್ಟ್ ಘೋಷಿಸಿದೆ.
ಅಲ್ಲದೆ, ಶಾಸಕ ಜಿ.ಮಂಜುನಾಥ ಅವರು ಹಿಂದುಳಿದ ವರ್ಗಗಳಿಗೆ ಸೇರಿದ ಬೈರಾಗಿ ಸಮುದಾಯದವರು ಹೊರತು ಪರಿಶಿಷ್ಟ ಜಾತಿಗಳಿಗೆ ಸೇರಿದ ಬೇಡ ಜಂಗಮ ಜನಾಂಗಕ್ಕೆ ಸೇರಿಲ್ಲ. ಹೀಗಾಗಿ, ಜಿ.ಮಂಜುನಾಥ್ ಅವರಿಗೆ 2012ರ ಎ.3ರಂದು ವಿತರಿಸಿರುವ ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ (ಬುಡಗ) ಜಾತಿಯ ಪ್ರಮಾಣಪತ್ರ ಕಾನೂನು ಬಾಹಿರವಾಗಿದೆ. ಇನ್ನು ಅದೇ ಜಾತಿ ಪ್ರಮಾಣಪತ್ರ ಸಲ್ಲಿಸಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರ ಮುಳಬಾಗಿಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವುದು ಅಕ್ರಮ ಎಂದು ಹೈಕೋರ್ಟ್ ತೀರ್ಪು ನೀಡಿದ್ದು, ಶಾಸಕರಿಗೆ 25 ಸಾವಿರ ರೂ. ದಂಡ ಸಹ ವಿಧಿಸಿದೆ.
ಜಿ.ಮಂಜುನಾಥ ಅವರು 2013ನೆ ಸಾಲಿನ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಮುಳಬಾಗಿಲು ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದ್ದ ಕ್ರಮದ ವಿರುದ್ಧ ಮುನಿನಂಜಪ್ಪ ಎಂಬುವರು ಹೈಕೋರ್ಟ್‌ಗೆ ಚುನಾವಣೆ ತಕರಾರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ತಾವು ಬೇಡ ಜಂಗಮ ಜಾತಿಗೆ ಸೇರಿರುವುದನ್ನು ಸಾಬೀತುಪಡಿಸಲು ಜಿ.ಮಂಜುನಾಥ್ ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿತು.
2013ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮುಳಬಾಗಿಲು ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಜಿ.ಮಂಜುನಾಥ ಅವರು ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ ಜಾತಿಯ ಪ್ರಮಾಣಪತ್ರದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅದನ್ನು ಚುನಾವಣಾಧಿಕಾರಿ ಅಂಗೀಕರಿಸಿದ್ದರು. 2013ರ ಮೇ 5ರಂದು ಚುನಾವಣೆ ನಡೆದಿತ್ತು. ಮೇ 8ರಂದು ಫಲಿತಾಂಶ ಪ್ರಕಟಗೊಂಡಿದ್ದು, ಮುಳಬಾಗಿಲು ಕ್ಷೇತ್ರದಿಂದ ಜಿ.ಮಂಜುನಾಥ್ ಗೆಲುವು ಸಾಧಿಸಿದ್ದರು.
ಇದರಿಂದ ಮುನಿನಂಜಪ್ಪ ಹೈಕೋರ್ಟ್ ಮೆಟ್ಟಿಲೇರಿ, ಜಿ.ಮಂಜುನಾಥ ಅವರು ಹಿಂದುಳಿದ ವರ್ಗಗಳಿಗೆ ಸೇರಿದ ಬೈರಾಗಿ ಸಮುದಾಯದವರು. ಕಾನೂನು ಬಾಹಿರವಾಗಿ 2012 ಎ.3ರಂದು ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ (ಬುಡಗ) ಜಾತಿ ಪ್ರಮಾಣಪತ್ರ ಪಡೆದುಕೊಂಡು ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಅವರ ನಾಮಪತ್ರವನ್ನು ಒಪ್ಪಿದ ಚುನಾವಣಾಧಿಕಾರಿಯ ಕ್ರಮ ಮತ್ತು ಜಿ.ಮಂಜುನಾಥ್ ಅವರ ಗೆಲುವನ್ನು ರದ್ದುಪಡಿಸಬೇಕು ಕೋರಿದ್ದರು.