ಬಿಜೆಪಿ ಸೋಲಿಸಲು ಕಾಂಗ್ರೆಸ್‍ಗೆ ಸಿಪಿಐ ಬೆಂಬಲ: ಕಮ್ಯೂನಿಸ್ಟ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ
ಚಿಕ್ಕಮಗಳೂರುಮ ಎ.25: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವುದಾಗಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರೇಣುಕರಾಧ್ಯ ತಿಳಿಸಿದರು.
ನಗರದಲ್ಲಿ ಬುಧವಾರ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷದ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದಿ ಬಿಜೆಪಿ ಮಣಿಸುವ ದೃಷ್ಠಿಯಿಂದ ಕಮ್ಯೂನಿಸ್ಟ್ ರಾಜ್ಯ ಹಾಗೂ ರಾಷ್ಟ್ರ ನಾಯಕರೊಂದಿಗೆ ಚರ್ಚಿಸಿ ಕಾಂಗ್ರೆಸ್ ಬೆಂಬಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರು ಕೂಡ ಆರೆಸ್ಸೆಸ್ ಹಾಗೂ ಸಂಘಪರಿವಾರದ ನಿಯಂತ್ರಣದಲ್ಲಿದೆ. ಜಾತ್ಯಾತೀತ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಬಿಜೆಪಿ ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ಕಾಂಗ್ರೆಸ್ ಜೊತೆ ಕೈಜೋಡಿಸಲಾಗಿದೆ ಎಂದರು.
ರಾಜ್ಯದ ಚುನಾವಣೆ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‍ರವರೊಂದಿಗೆ ಚರ್ಚಿಸಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರುತ್ತೇವೆ. ಕಮ್ಯೂನಿಸ್ಟ್ ಪಕ್ಷ ಬೆಂಬಲಿಸುವ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಜೆಡಿಎಸ್ ಸಂಪೂರ್ಣವಾಗಿ ಕೋಮುವಾದಿ ಪಕ್ಷದೊಂದಿಗೆ ಕೈ ಜೋಡಿಸುವುದಿಲ್ಲ ಎಂಬ ವಿಶ್ವಾನ ಕಮ್ಯೂನಿಸ್ಟ್ ಪಕ್ಷಕ್ಕಿಲ್ಲ ಆದ್ದರಿಂದ ಜೆಡಿಎಸ್‍ನಿಂದ ದೂರ ಉಳಿದಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯ್‍ಕುಮಾರ್ ಮಾತನಾಡಿ, ರಾಜ್ಯಾಧ್ಯಂತ ಕಮ್ಯೂನಿಸ್ಟ್ ಪಕ್ಷ ಕಾಂಗ್ರೆಸ್ ಬೆಂಬಲಿಸಲಿದೆ. ಅದೇ ರೀತಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ ಇದನ್ನು ಸ್ವಾಗತಿಸುತ್ತೇನೆ ಎಂದರು.
ಜಾತಿ ಧರ್ಮದ ಹೆಸರಿನಲ್ಲಿ ರಾಜ್ಯದಲ್ಲಿಯೂ ಕೇಸರಿಕರಣ ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ. ಅದು ನಡೆಯುವುದಿಲ್ಲ, ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ. ಕೋಮುವಾದದ ಪಕ್ಷ ಸೋಲಿಸಿ ಜಾತ್ಯಾತೀತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದರು.
ಕಮ್ಯೂನಿಸ್ಟ್ ಪಕ್ಷದ ರಾಧ ಸುಂದರೇಶ್ ಮಾತನಾಡಿ, ಬಿಜೆಪಿಯ ಹೊಡಿ, ಬಡಿ ರಾಜಕಾರಣ ಹೊರಹೋಗಬೇಕು. ಪ್ರಜಾಪ್ರಭುತ್ವ ಉಳಿಯಬೇಕು ಎನ್ನುವ ಉದ್ದೇದಿಂದ ಕಾಂಗ್ರೆಸ್ ಬೆಂಬಲಿಸುತ್ತಿದ್ದೇವೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಜಿ.ರಘು, ವಿಜಯ್‍ಕುಮಾರ್, ಕಾಂಗ್ರೆಸ್ ಪಕ್ಷದ ಶಿವಾನಂದ ಸ್ವಾಮಿ ಇದ್ದರು.
ಎಂ.ಕೆ.ಪ್ರಾಣೇಶ್ ಸಿಟಿ ರವಿ ಋಣ ತೀರಿಸುತ್ತಿದ್ದಾರೆ: ಎಂ.ಕೆ ಪ್ರಾಣೇಶ್ ವಿಧಾನ ಪರಿಷತ್‍ನ ಕೂಸು. ಪ್ರಭುದ್ಧ ರಾಜಕಾರಣ ಬಿ.ಎಲ್. ಶಂಕರ್ ಬಗ್ಗೆ ಮಾತನಾಡುವ ಯೋಗ್ಯತೆ ಎಂ.ಕೆ. ಪ್ರಾಣೇಶ್ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್. ವಿಜಯ್‍ಕುಮಾರ್ ಹೇಳಿದರು.
ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಲ್. ಶಂಕರ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಲೋಕಸಭಾ ಸದಸ್ಯರಾಗಿ, ಮಂತ್ರಿಯಾಗಿ ರೈಲ್ವೇ ಯೋಜನೆ, ಟೆಲಿಪೋನ್ ಎಕ್ಸ್‍ಚೇಜ್, ಕಾಫಿ ಓಪನ್ ಮಾಕೇರ್ಟ್ ತಂದವರು. ಎಂ.ಕೆ. ಪ್ರಾಣೇಶ್‍ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು. ಎಂ.ಕೆ. ಪ್ರಾಣೇಶ್ ಎಂಎಲ್‍ಸಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಿ.ಟಿ.ರವಿ ಸಹಕಾರ ಪಡೆದು ಗೆದ್ದು ಬಂದರು. ಸಿ.ಟಿ.ರವಿ ಋಣ ಈಗ ತೀರಿಸುತ್ತಿದ್ದಾರೆ ಎಂದರು.
ಕರಗಡ ಯೋಜನೆಗೆ 20 ಕೋಟಿ ರು. ಕಾಂಗ್ರೆಸ್ ಬಿಡುಗಡೆ ಮಾಡಿಸಿರುವುದು ಕಾಂಗ್ರೆಸ್ಸಿಗರು ಸಾಬೀತು ಪಡಿಸಿದರೆ ಸಿ.ಟಿ.ರವಿ ಚುನಾವಣಾ ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎಂಬ ಎಂ.ಕೆ. ಪ್ರಾಣೇಶ್ ಸವಾಲಿಗೆ ಉತ್ತರಿಸಿದ ಡಾ. ಡಿ.ಎಲ್. ವಿಜಯ್‍ಕುಮಾರ್, ಸಿ.ಟಿ.ರವಿ ಮೂರು ಬಾರಿ ಶಾಸಕರಾಗಿ, ಮಂತ್ರಿಯಾಗಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಹತಾಶೆಯಿಂದ ಈ ರೀತಿ ಸವಾಲು ಹಾಕುತ್ತಿದ್ದಾರೆ. 20 ಕೋಟಿ ಹಣ ತಂದಿರುವ ಬಗ್ಗೆ ಜನತೆಗೆ ಲೆಕ್ಕ ಕೊಡುತ್ತೇವೆಂದು ಹೇಳಿದರು.