ಅಂಬೇಡ್ಕರ್ ಜಯಂತಿ ಮನುಶಾಸ್ತ್ರ ವಿರೋಧಿಸುವ ಹೋರಾಟವಾಗಬೇಕಿದೆ: ಪ್ರೊ.ಜಿ.ಕೆ.ಗೋವಿಂದರಾವ್

Update: 2018-04-25 17:31 GMT

ಚಿಕ್ಕಮಗಳೂರು, ಎ.25: ಪ್ರಸಕ್ತ ದೇಶದಲ್ಲಿ ಮನುವಾದ ಮೇಲುಗೈ ಸಾಧಿಸುತ್ತಿದ್ದು, ದೇಶಕ್ಕೆ ಕ್ರಿಯಾಶೀಲ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ವಾದದ ಧ್ವನಿಗಳು ಕ್ಷೀಣಿಸುತ್ತಿವೆ. ಮನುವಿನ ಧರ್ಮಶಾಸ್ತ್ರ ದೇಶವನ್ನಾಳುತ್ತಿದ್ದು, ರಾಜ್ಯದಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಲು ಮನುವಾದ ಹಾಗೂ ಮನುವಾದಿಗಳು ಹುನ್ನಾರ ನಡೆಸುತ್ತಿದ್ದಾರೆ. ಇಂತಹ ವಿಷಮ ಸಂದರ್ಭಲ್ಲಿ ಅಂಬೇಡ್ಕರ್ ಜಯಂತಿ ಎಂಬುದು ಮನುವಾದ ವಿರೋಧಿಸುವ ಹೋರಾಟವಾಗಬೇಕೆಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಕರೆ ನೀಡಿದ್ದಾರೆ.

ಜಿಲ್ಲೆ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ನಗರದ ಕುವೆಂಪು ಕಲಾಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಬುಧವಾರ ದಲಿತ ಹೋರಾಟಗಾರ ಎಂ.ಡಿ.ಗಂಗಯ್ಯ ಅವರ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 'ಎತ್ತ ಸಾಗುತ್ತಿದೆ ಭಾರತ' ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಅಸ್ತಿತ್ವ ಹಾಗೂ ಉಳಿವಿಗಾಗಿ ಮನು ಶಾಸ್ತ್ರದ ಮೂಲಕ ಯಾರು ಯೋಗ್ಯರು, ಯಾರು ಅಯೋಗ್ಯರು, ಯಾರು ವಿಧ್ಯೆ ಹೊಂದಬೇಕು, ಹೊಂದಬಾರದು, ಯಾರು ಉಚ್ಛ, ಯಾರು ನೀಚ ಎಂದು ಬಾರತೀಯ ಸಮಾಜವನ್ನು ಒಡೆದು ಆಳಿದರು. ಅಂಬೇಡ್ಕರ್ ಅವರು ಸಮಾನತೆ-ಸಹೋದರತೆಯನ್ನು ನಿರಾಕರಿಸುವ ಮನುಶಾಸ್ತ್ರವನ್ನು ಸುಟ್ಟು ಹಾಕಿದರು. ಸಂವಿಧಾನ ರಚನೆಯಾದ ನಂತರ ಮನುವಾದಕ್ಕೆ ದೇಶದಲ್ಲಿ ಕೊಂಚ ಹಿನ್ನಡೆಯಾಯಿತು. ಅಂಬೇಡ್ಕರ್ ಹೋರಾಟದ ಭಾಗವಾಗಿರುವ ಸಂವಿಧಾನದಿಂದ ಭವಿಷ್ಯದಲ್ಲಿ ಮನುವಾದಕ್ಕೆ ಅಸ್ತಿತ್ವವಿರುವುದಿಲ್ಲ ಎಂಬ ಭಯದಿಂದ ಮತ್ತೆ ಮನುವಾದ ಆಧರಿತ ಸಮಾಜ ನಿರ್ಮಾಣಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಷಡ್ಯಂತ್ರ ನಡೆಸುತ್ತಿದೆ. ಸದ್ಯ ಈ ಹಿನ್ನಾರದಲ್ಲಿ ಯಶ ಕಾಣುತ್ತಿರುವ ಮನುವಾದಿಗಳಿಂದಾಗಿ ಇಂದಿಗೂ ದಲಿತರು, ಶೋಷಿತರು ಮತ್ತು ಮಹಿಳೆಯರಯ ಮೂರನೆ ಧರ್ಜೆಯ ಪ್ರಜೆಗಳಾಗುತ್ತಿದ್ದಾರೆಂದು ಅವರು ಆತಂಕ ವ್ಯಕ್ತಪಡಿಸಿದರು.

ಅಂಬೇಡ್ಕರ್ ಹಿಂದೆ ಮನುಶಾಸ್ತ್ರವನ್ನು ಸುಟ್ಟರು. ಆದರೆ ಪ್ರಸಕ್ತ ಮಠಶಾಸ್ತ್ರಗಳು ಮನುವಾದಕ್ಕೆ ಪುಷ್ಠಿ ನೀಡುತ್ತಿವೆ. ಮಠ ಮಾನ್ಯಗಳ ಅಣತಿಯೇ ರಾಜ್ಯ, ದೇಶದ ಕಾನೂನು ಆಗುತ್ತಿದೆ. ದೇಶಾಧಿಕಾರವನ್ನು ಕೆಲ ಮಠಮಾನ್ಯಗಳು ನಿಯಂತ್ರಿಸುತ್ತಿವೆ. ಜನರ ಬಳಿಗೆ ಬರಬೇಕಾಗಿದ್ದ ರಾಜಕಾರಣಿಗಳು ಮಠಾಧೀಶರ ಬಳಿಗೆ ಮೊದಲು ಹೋಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಜನರಿಗಿಂತ ಮಠಾಧೀಶರಿಗೆ ಆದ್ಯತೆ ನೀಡುತ್ತಿರುವುದೂ ಮನುವಾದಿಗಳು ಹುನ್ನಾರದ ಭಾಗವಗಿದೆ ಎಂದು ವಿಶ್ಲೇಷಿಸಿದ ಅವರು, ಬುಧ್ಧ, ಬಸವಣ್ಣನವರ ಮಾನವೀಯತೆಯ ಧರ್ಮವೇ ಶ್ರೇಷ್ಟ ಧರ್ಮವಾಗಿದೆ. ಜಾತಿಯಿಂದ ಬ್ರಾಹ್ಮಣನಾಗಿದ್ದರೂ ನೀಚ ಕುಲದ ತಂದೆ-ತಾಯಿಗೆ ತಾನು ಹಿಟ್ಟಿದೆ ಎನ್ನುವ ಮೂಲಕ ಬಸವಣ್ಣನವರು ಕೀಳು ಜನರೆಂದು ಅವಮಾನಕ್ಕೆ ಗುರಿಯಾಗಿದ್ದವರ ಮಧ್ಯೆ ಗುರುತಿಸಿಕೊಂಡು ಮನುಷ್ಯ ಧರ್ಮದ ಅನುಭವ ಪಡೆದರು. ಮನುಷ್ಯತ್ವದ ಧರ್ಮವನ್ನೇ ಅವರು ಪ್ರತಿಪಾದಿಸಿದರು. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ಕೇವಲ ಮನುಷ್ಯ ಮಾತ್ರನಾಗುವುದು ಹೇಗೆಂದು ತಿಳಿ ಹೇಳುವುದೇ ಧರ್ಮ. ಬುದ್ದ ಹಾಗೂ ಬಸವಣ್ಣನವರದ್ದು ನಿಜವಾದ ಧರ್ಮ ಎಂದರು.

ಭಯ, ಪಾಪ-ಪುಣ್ಯ, ಪುನರ್ಜನ್ಮ ಎಂಬ ಸುಳ್ಳು ಸಿದ್ಧಾಂತಗಳಿಗೆ ಧೈವಿಕ ಸ್ವರೂಪ ನೀಡಿ ಮಠಗಳು ಮನುವಾದದ ಅಸ್ತಿತ್ವ ಉಳಿಸಕೊಳ್ಳಲು ಪ್ರಯತ್ನಿಸಿಸುತ್ತಿವೆ. ಆದ್ದರಿಂದ ಕಾವಿಬಟ್ಟೆಗಳಿಗೆ ಕಣ್ಣುಮುಚ್ಚಿಕೊಂಡು ಕಾಲಿಗೆ ಬೀಳುವುದು ಅಮಾನವೀಯ ಪದ್ಧತಿಯಾಗಿದೆ. ತಾಯಿ ಪ್ರಕೃತಿಯ ಪ್ರತಿನಿಧಿಯಾಗಿದ್ದಾಳೆ. ಕಾಲಿಗೆ ಬೀಳುವುದಾದರೆ ತಾಯಿ ಕಾಲಿಗೆ ಬೀಳಿ. ಮಠಾಧೀಶರು ಮತ್ತು ಮನುವ್ಯಾದಿಗಳನ್ನು, ಅವರ ಧರ್ಮಗಳನ್ನು ಧಿಕ್ಕರಿಸಿ ಎಂದು ಕರೆ ನೀಡಿದ ಅವರು,  ಭಗವದ್ಗೀತೆ, ಪುನಿಷತ್, ವೇದಗಳು ಅದ್ಭುತವಾಗಿದ್ದರೂ ಅವುಗಳನ್ನು ಜನರಿಗೆ ಪ್ರಶ್ನಿಸುವ ಹಕ್ಕನ್ನು ನೀಡಿಲ್ಲ. ಅವುಗಳು ಹೇಳಿದ್ದೇ ಅಂತಿಮ. ಆದರೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಈ ಹಕ್ಕುಗಳೇ ಜೀವಾಳ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಮ್ಮ ಧರ್ಮ, ಸಂವಿಧಾನವೇ ನಮ್ಮ ಧರ್ಮ ಗ್ರಂಥ ಎಂಬುದನ್ನು ಯುವಜನತೆ ಘಂಟಾಘೋಷವಾಗಿ ಸಾರಬೇಕೆಂದರು. 

ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದಾಗಿ ದೇಶದಲ್ಲಿ ಪ್ರಸಕ್ತ ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶಾದ್ಯಂತ ಮಹಿಳೆಯರೂ ಸೇರಿದಂತೆ ಅಲಕ್ಷಿತ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಗುಜಾರಾತ್‍ನ ಊನಾ, ಯುಪಿ ಅಕ್ಲಾಕ್ ಪ್ರಕರಣ, ಜಮ್ಮು ಕಾಶ್ಮೀರದ ಬಾಲಕಿ ಅತ್ಯಾಚಾರ, ಕುದುರೆ ಸವಾರಿ ಮಾಡಿದ, ಮೀಸೆ ಬಿಟ್ಟ ಯುವಕರ ಹತ್ಯೆ ಮತ್ತಿತರ ಮಾನವೀಯ ಘಟನಗಳನ್ನು ಮೆಲುಕು ಹಾಕಿದ ಅವರು, ಮೀಸಲಾತಿ, ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ, ಭಡ್ತಿ ಮೀಸಲಾತಿಯಂತಹ  ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳಲು ಕೇಂದ್ರ ಸರಕಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದೆ. ಇದನ್ನು ಅಲಕ್ಷಿತ ಸಮುದಾಯಗಳ ಜನತೆ ಅರ್ಥ ಮಾಡಿಕೊಂಡು ಅಂಬೇಡ್ಕರ್ ಹಾದಿಯಲ್ಲಿ ಶಿಕ್ಷಣ, ಸಂಘಟನೆ, ಸಂಘರ್ಷದ ಹಾದಿಯಲ್ಲಿ ಹೋರಾಟಕ್ಕಿಳಿಯಬೇಕಿದೆ. ಮನುವಾದಿಗಳ ಸೊಕ್ಕು ಮುರಿಯಲು ಚುನಾವಣಾ ಅಸ್ತ್ರವನ್ನು ಯೋಚಿಸಿ ಬಳಸಬೇಕೆಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಜಾತ್ಯತೀತರಿಗೆ ಅಧಿಕಾರಿ ನೀಡಿ ಕೋಮವಾದಿಗಳನ್ನು ದೂರವಿಡಬೇಕೆಂದರು.

ದಸಂಸ ರಾಜ್ಯ ಸಂಚಾಲಕ (ಅಂಬೇಡ್ಕರ್‍ವಾದ) ಮಾವಳ್ಳಿ ಶಂಕರ್ ಮಾತನಾಡಿ, ಬಿಜೆಪಿ ಮತ್ತು ಸಂಘಪರಿವಾರ ದೇಶದ ಯುವಕರಲ್ಲಿ ಧರ್ಮದ ಅಮಲು, ನಂಜನ್ನುಣ್ಣುವಂತೆ ಮಾಡಿರುವುದರಿಂದ ದೇಶ ದಿಕ್ಕಂಪಾಲಾಗಿ ಸಾಗುತ್ತಿದೆ. ಯುವಕರಲ್ಲಿ ಭ್ರಮೆಗಳು ಮತ್ತು ಹುಸಿ ಚರಿತ್ರೆಗಳ ವಿಷ ಭಿತ್ತಿ ದೇಶಾದ್ಯಂತ ಅಧಿಕಾರ ಗಿಟ್ಟಿಸಿಕೊಳ್ಳುವ ಹುನ್ನಾರದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಯಶ ಕಾಣುತ್ತಿದೆ. ಕರ್ನಾಟಕಲ್ಲಿ ಇದು ಸಾಧ್ಯವಾಗಬಾರದು. ಅಂಬೇಡ್ಕರ್ ಚಿಂತನೆಯ ಹಾದಿಯಲ್ಲಿ ಮನುವಾದದ ವಿರುದ್ದ ವೈಚಾರಿಕ ಹೋರಾಟ ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಜನ ಸಾಂಸ್ಕೃತಿಕ ಕಲಾ ತಂಡದ ಮೂರ್ತಿ, ಹರೀಶ್ ತಂಡದವರ ಕ್ರಾಂತಿಗೀತೆಗಳು ಜನಮನ ಸೂರೆಗೊಂಡವು, ದಲಿತ ಸಂಘಟನೆಗಳ ಒಕ್ಕೂಟದ ಕೂದುವಳ್ಳಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮರ್ಲೆ ಅಣ್ಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿಂತಕರಾದ ರುದ್ರಮೂರ್ತಿ, ಮಂಡ್ಯ ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್, ದಸಂಸ ರಾಜ್ಯ ಮುಖಂಡರಾದ ರಾಜರತ್ನಂ ದಂಟರಮಕ್ಕಿ  ಶ್ರೀನಿವಾಸ್, ಸಿದ್ದಲಿಂಗಯ್ಯ, ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್, ಜಾಗೃತಿ ವಿದ್ಯಾರ್ಥಿ ವೇದಿಕೆಯ ಅಂಗಡಿ ಚಂದ್ರು, ಹಾಸನದ ಲಕ್ಷ್ಮಣ್, ಮಲ್ಲೇಶ್ ಕುಮಾರ್, ರಮೇಶ್, ಪೂರ್ಣೇಶ್ ಮತ್ತಿತರರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News