×
Ad

ಸೋಲುವ ಭೀತಿಯಿಂದ ಚುನಾವಣಾ ಕಣದಿಂದ ಹಿಂದೆ ಸರಿದೆ: ಬಿ.ಕೆ.ಮಂಜುನಾಥ್

Update: 2018-04-25 23:29 IST

ತುಮಕೂರು.ಏ.25: ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಟಿಕೆಟ್ ಘೋಷಣೆ ಮಾಡಿ, ಲಾಬಿಗೆ ಒಳಗಾಗಿ ಬಿ.ಫಾರಂ ನೀಡದ ಬಿಜೆಪಿ ಜಿಲ್ಲಾ ಮತ್ತು ರಾಜ್ಯ ಮುಖಂಡರ ನಡವಳಿಕೆಯನ್ನು ಖಂಡಿಸಿ, ಕಣದಿಂದ ಹಿಂದೆ ಸರಿದಿರುವುದಾಗಿ ಬಿಜೆಪಿ ಹಿಂದುಳಿದ ಮೋರ್ಚ ಜಿಲ್ಲಾಧ್ಯಕ್ಷ ಶಿರಾದ ಬಿ.ಕೆ.ಮಂಜುನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇವರ ನಡವಳಿಕೆಯಿಂದ ನನಗೆ ಟಿಕೆಟ್ ನೀಡಿದಂತೆ ಮಾಡಿ, ಇನ್ನೊಬ್ಬರನ್ನು ಬೆಂಬಲಿಸಿ, ನನ್ನನ್ನು ಸೋಲಿಸುವ  ಜಿಲ್ಲಾ ನಾಯಕರ ರಾಜಕೀಯ ಹುನ್ನಾರ ಅರ್ಥವಾಗಿದ್ದು, ಈಗಾಗಲೇ ಎರಡು ಚುನಾವಣೆಗಳಲ್ಲಿ ಸೋತಿರುವ ನಾನು ಮತ್ತೊಮ್ಮೆ ಸೋಲು ಅನುಭವಿಸಲು ತಯಾರಿಲ್ಲದೆ ಸ್ಪರ್ಧೆಯಿಂದ ಹಿಂದೆ ಸರಿದು ತಟಸ್ಥನಾಗಿರಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯತ್ ಸದಸ್ಯನಾಗಿ, ತಾ.ಪಂ.ಸದಸ್ಯನಾಗಿ, ಅಧ್ಯಕ್ಷನಾಗಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷನಾಗಿ,ಜೆಡಿಎಸ್ ಪಕ್ಷದಲ್ಲಿ  ರಾಜಕೀಯವಾಗಿ ಗುರುತಿಸಿಕೊಂಡಿದ್ದ ನನ್ನನ್ನು ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್, ಎಂ.ಬಿ.ನಂದೀಶ್ ಮತ್ತಿತರರ ಮುಖಂಡರು ಬಿಜೆಪಿ ಪಕ್ಷಕ್ಕೆ ಕರೆತಂದರು. ಬಿಜೆಪಿ ಸೇರ್ಪಡೆಗೊಂಡ ನಂತರ ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡಿದಿದ್ದೇನೆ. ಇಷ್ಟು ಕಷ್ಟಪಟ್ಟು ಪಕ್ಷ ಕಟ್ಟಿದ ನನಗೆ ಟಿಕೆಟ್ ನೀಡಿ, ಬಿ.ಫಾರಂ ನೀಡಲು ಎರಡು ದಿನ ಸತಾಯಿಸಿ, ಲೆಡ್ಜರ್ ಗೆ ಸಹಿ ಮಾಡಿಸಿಕೊಂಡ ನಂತರವೂ ಬಿ.ಫಾರಂ ನೀಡಲಿಲ್ಲ. ಮುಖಂಡರ ಈ ಧೋರಣೆ ಕುರಿತು ಕುಟುಂಬದ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಹಿಂದೆ ಸರಿದಿದ್ದು, ಇದಕ್ಕೆ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರೇ ನೇರ ಹೊಣೆ. ಅವರಿಂದ ಇಡೀ ಜಿಲ್ಲೆಯಲ್ಲಿ ಪಕ್ಷ ಸರ್ವನಾಶವಾಗಲಿದೆ ಎಂದು ಭವಿಷ್ಯ ನುಡಿದರು.

ಹಿಂದುಳಿದ ಸಮುದಾಯಕ್ಕೆ ಅಪಮಾನ: ತುಮಕೂರು ಜಿಲ್ಲೆಯಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಲಾಗಿದೆ. ಮಧುಗಿರಿ ಕ್ಷೇತ್ರದಿಂದ ಡಾ.ಎಂ.ಆರ್.ಹುಲಿನಾಯ್ಕರ್ ಟಿಕೇಟ್ ಕೇಳದಿದ್ದರೂ ಟಿಕೆಟ್ ನೀಡಿ ಗೊಂದಲ ಸೃಷ್ಟಿಸಿದರು. ಹತ್ತಾರು ವರ್ಷದಿಂದ ಪಕ್ಷ ಕಟ್ಟಿದ ಪಾವಗಡದ ಕೃಷ್ಣಾನಾಯ್ಕ್ ಅವರಿಗೆ ಮೋಸ ಮಾಡಿ, ಬಲರಾಮ್ ಅವರಿಗೆ ಟಿಕೇಟ್ ಕೊಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿಯೂ ಕೆ.ಎಸ್.ಕಿರಣ್‍ಕುಮಾರ್ ಅವರಿಗೂ ಮೋಸ ಮಾಡಲಾಗಿದೆ. ಮಧುಗಿರಿ ಉಪವಿಭಾಗದ ಕೊರಟಗೆರೆ,ಮಧುಗಿರಿ, ಪಾವಗಡ, ಶಿರಾದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಹುನ್ನಾರ ನಡೆಸಿದ್ದಾರೆ. ಇಡೀ ಜಿಲ್ಲೆಯಲ್ಲಿಯೇ ಜಿ.ಎಸ್.ಬಸವರಾಜು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಕೆಲವರಷ್ಟೇ ಗೆಲ್ಲಬೇಕೆಂಬುದು ಅವರ ಆಸೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಲುಮತ ಒಕ್ಕೂಟದ ಜಿಲ್ಲಾಧ್ಯಕ್ಷ ಗರುಡಯ್ಯ, ನಗರಸಭೆ ಮಾಜಿ ಸದಸ್ಯ ಲಕ್ಷ್ಮನರಸಿಂಹರಾಜು, ಕೆ.ಪಿ.ಕುಮಾರಸ್ವಾಮಿ ಮತ್ತು ಟಿ.ಇ.ರಘುರಾಮ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News