2019ರ ಮಹಾಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಕನ್ಹಯ್ಯಾ, ಶೆಹ್ಲಾ ರಶೀದ್

Update: 2018-04-26 03:50 GMT

ಹೊಸದಿಲ್ಲಿ, ಎ.26: ಜೆಎನ್‌ಯು ಪ್ರತಿಭಟನೆ ವೇಳೆ ಮುಂಚೂಣಿ ನಾಯಕರಾಗಿ ಬೆಳೆದ ಕನ್ಹಯ್ಯ ಕುಮಾರ್ ಮತ್ತು ಶೆಹ್ಲಾ ರಶೀದ್ ಅವರು 2019ರ ಮಹಾಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಎನ್‌ಡಿಎ ಸರ್ಕಾರದ ನೀತಿಗಳನ್ನು ಪ್ರಬಲವಾಗಿ ವಿರೋಧಿಸುತ್ತಾ ಬಂದಿರುವ ಈ ಇಬ್ಬರು ಯುವ ಕಣ್ಮಣಿಗಳು, ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ರಂಗವನ್ನು ಹಾಗೂ "ಉದಾರವಾದಿ, ಪ್ರಗತಿಪರ ಶಕ್ತಿಗಳನ್ನು" ರೂಪಿಸಿ ಬಿಜೆಪಿ ವಿರುದ್ಧ ಮುಂಬರುವ ಮಹಾಚುನಾವಣೆಯಲ್ಲಿ ಹೋರಾಡುವುದಾಗಿ ಪ್ರಕಟಿಸಿದ್ದಾರೆ. ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಐತಿಹಾಸಿಕ ಜಯ ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

"ಹಿಂದೂಸ್ತಾನ್ ಟೈಮ್ಸ್"ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕನ್ಹಯ್ಯ, ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. "ಬಿಹಾರದಲ್ಲಿ ಆರ್‌ಜೆಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳ ಮೈತ್ರಿ ಏರ್ಪಟ್ಟರೆ, ಸಮಾನ ಅಭ್ಯರ್ಥಿಯಾಗಲು ಮತ್ತು ನನ್ನ ಚುನಾವಣೆಗೆ ಧನಸಂಗ್ರಹಕ್ಕೆ ಕೋರಬಹುದು. ನಾನು ಅಭ್ಯರ್ಥಿಯಾಗಬಹುದು" ಎಂದು ಕುಮಾರ್ ಸ್ಪಷ್ಟಪಡಿಸಿದರು.

"ಸಂಘಟಿತ ರಾಜಕೀಯದಲ್ಲಿ ನನಗೆ ನಂಬಿಕೆ. ನಾನು ಚುನಾವಣೆಗೆ ಸ್ಪರ್ಧಿಸಿದರೆ, ಮುಖ್ಯವಾಹಿನಿ ಪಕ್ಷದ ಮೂಲಕ. ಇದು ಸುಸ್ಪಷ್ಟ. ವೈಯಕ್ತಿಯ ವರ್ಚಸ್ಸಿನಲ್ಲಿ ನನಗೆ ನಂಬಿಕೆ ಇಲ್ಲ" ಎಂದು ಹೇಳಿದರು.

ಸಿಪಿಐ ಸಂಯೋಜಿತ ಎಐಎಸ್‌ಎಫ್ ಸಂಘಟನೆಯ ಪ್ರತಿನಿಧಿಯಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕನ್ಹಯ್ಯಾ, ತವರು ಜಿಲ್ಲೆಯಾದ ಬಿಹಾರದ ಬೆಗುಸರಾಯ್‌ನಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ.

ಸಿಪಿಐ- ಎಂಎಲ್ ಸಂಯೋಜಿತ ಅಖಿಲ ಭಾರತ ವಿದ್ಯಾರ್ಥಿ ಸಂಘದ ಪ್ರತಿನಿಧಿಯಾಗಿ ಉಪಾಧ್ಯಕ್ಷೆ ಹುದ್ದೆಗೇರಿದ ಶೆಹ್ಲಾ ಕೂಡಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.

"ಸಹಜ ಪರಿಸ್ಥಿತಿಯಲ್ಲಿ, ನಾನು ಚುನಾವಣೆಗೆ ಸ್ಪರ್ಧಿಸಬೇಕಾಗಬಹುದು" ಎಂಬ ಸುಳಿವು ನೀಡಿದ್ದಾರೆ. ಶ್ರೀನಗರ ಮೂಲದ ಶೆಹ್ಲಾ ಇದುವರೆಗೆ ಯಾವುದೇ ಪಕ್ಷ ಅಥವಾ ಕ್ಷೇತ್ರ ಆಯ್ಕೆ ಮಾಡಿಕೊಂಡಿಲ್ಲ. ಆದರೆ ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News