ಈ 12 ರೀತಿಯ ಪರ್ಯಾಯ ಗುರುತಿನ ಚೀಟಿ ತೋರಿಸಿ, ಮತ ಚಲಾಯಿಸಿ
ಬೆಂಗಳೂರು, ಎ.27: ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಗುರುತಿನ ಚೀಟಿಯಿಲ್ಲದಿದ್ದರೂ, ಚುನಾವಣಾ ಆಯೋಗ ಸೂಚಿಸುವ 12 ಪರ್ಯಾಯ ಗುರುತಿನ ಚೀಟಿ ತೋರಿಸಿ ಮತ ಚಲಾವಣೆ ಮಾಡಬಹುದಾಗಿದೆ.
ಮತದಾರರಲ್ಲಿ ಗೊಂದಲ ನಿವಾರಣೆ ಮಾಡುವ ಸಲುವಾಗಿ ಚುನಾವಣಾ ಆಯೋಗ 12 ಪರ್ಯಾಯ ಗುರುತಿನ ಚೀಟಿಗಳನ್ನು ಬಳಕೆ ಮಾಡಲು ಆದೇಶ ನೀಡಿದೆ. ಅಲ್ಲದೆ, ಭಾರತ ಚುನಾವಣಾ ಆಯೋಗವು ಈಗಾಗಲೇ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಗುರುತು ಪತ್ರಗಳನ್ನು(ಇಪಿಐಸಿ) ವಿತರಿಸಿದ್ದು, ಮತಗಟ್ಟೆಗಳಲ್ಲಿ ಮತ ಚಲಾವಣೆ ಮಾಡುವುದಕ್ಕಿಂತ ಮೊದಲು ಕರ್ತವ್ಯದಲ್ಲಿರುವ ಸಿಬ್ಬಂದಿಗೆ ತೋರಿಸಬೇಕಾಗುತ್ತದೆ.
ಮತದಾರರು ತಮ್ಮ ಗುರುತು ಸಾಬೀತು ಮಾಡಲು ಇಪಿಐಸಿ ಹಾಜರುಪಡಿಸಿ ಹಾಗೂ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಿರುವ 12 ಪರ್ಯಾಯ ಗುರುತು ಪತ್ರಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಲು ಆಯೋಗ ಅವಕಾಶ ನೀಡಲಾಗಿದೆ.
ಪರ್ಯಾಯ ಗುರುತಿನ ಚೀಟಿಗಳ ಪಟ್ಟಿ: ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಿಗೆ(ಡಿಎಲ್), ಕೇಂದ್ರ ಅಥವಾ ರಾಜ್ಯ ಸರಕಾರ ಸಾರ್ವಜನಿಕ ವಲಯ ಸಂಸ್ಥೆಗಳು ಮತ್ತು ಖಾಸಗಿ ನಿಯಮಿತ ಸಂಸ್ಥೆಗಳಿಂದ ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತು ಪತ್ರಗಳು, ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್‌ಬುಕ್‌ಗಳು, ಪಾನ್ ಕಾರ್ಡ್, ಎನ್‌ಪಿಆರ್ ಅಡಿ ಆರ್‌ಜಿಐನಿಂದ ನೀಡಲಾದ ಸ್ಮಾರ್ಟ್ ಕಾರ್ಡ್.
ಎಂಜಿನರೇಗಾ ಉದ್ಯೋಗ ಚೀಟಿ, ಕಾರ್ಮಿಕ ಸಚಿವಾಲಯ ಯೋಜನೆ ಅಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆಪತ್ರ, ಚುನಾವಣಾ ಆಯೋಗದಿಂದ ನೀಡಲಾದ ದೃಢೀಕೃತ ಭಾವಚಿತ್ರವಿರುವ ಮತದಾರರ ಚೀಟಿ, ಸಂಸದರು ಹಾಗೂ ಶಾಸಕರಿಗೆ ನೀಡಲಾದ ಅಧಿಕೃತ ಗುರುತು ಚೀಟಿಗಳು ಹಾಗೂ ಆಧಾರ್ ಕಾರ್ಡ್‌ಗಳನ್ನು ಬಳಸಿ ಮತ ಚಲಾವಣೆ ಮಾಡಬಹುದಾಗಿದೆ.
ಮತ ಕೇಂದ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸುವುದಕ್ಕೂ ಮುನ್ನ ಇಪಿಐಸಿ ಇಲ್ಲದಿದ್ದರೆ ಮತದಾರರ ಈ 12 ಗುರುತು ಚೀಟಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮತದಾನಕ್ಕೆ ಸಿಬ್ಬಂದಿ ಅವಕಾಶ ನೀಡಬಹುದು ಎಂದು ಚುನಾವಣಾ ಆಯೋಗವು ರಾಜ್ಯದ ಮುಖ್ಯ ಚುನಾವಣಾಧಿಕಾರಿ ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದು, ಮತದಾನ ಸಂದರ್ಭದಲ್ಲಿ ಐಪಿಇಸಿ ಕಡ್ಡಾಯವಾಗಿ ಹೊಂದಿರಬೇಕು. ಅದನ್ನು ಪಡೆಯದಿದ್ದಲ್ಲಿ ಮತದಾನ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಲಾಗಿದೆ.