×
Ad

ಪ್ರಶ್ನೆಗೆ ಉತ್ತರಿಸಲಾಗದೆ ಹೊರನಡೆದ ಬಿಜೆಪಿ ವಕ್ತಾರ ವಾಮನಚಾರ್ಯ

Update: 2018-04-27 19:52 IST

ಮೈಸೂರು,ಎ.27: ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಕುರಿತು ಟೀಕಿಸಲು ಬಂದಿದ್ದ ಬಿಜೆಪಿ ವಕ್ತಾರ ವಾಮನಚಾರ್ಯ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಕಾಲ್ಕಿತ್ತ ಘಟನೆ ನಡೆದಿದೆ.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪ್ರಣಾಳಿಕೆ ವಿಷಯ ಮಾತನಾಡುತ್ತಿದ್ದರು. ಈ ವೇಳೆ 'ಕಳೆದ ಬಾರಿ ನೀಡಿದ್ದ 200 ಭರವಸೆಗಳಲ್ಲಿ ಕೇವಲ 40 ರಷ್ಟನ್ನು ಈಡೇರಿಸಿದ್ದಾರೆ. ಅದೆಲ್ಲವೂ ಕೇಂದ್ರ ಸರಕಾರದ್ದು' ಎಂದು ಹೇಳುತ್ತಿದ್ದಂತೆಯೇ ಪತ್ರಕರ್ತರು ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು.

'ಕೇಂದ್ರದ ಮೋದಿ ಸರಕಾರ ನೀಡಿದ್ದ  ಭರವಸೆಗಳಲ್ಲಿ ಯಾವುದನ್ನು ಈಡೇರಿಸಲಾಗಿದೆ ತಿಳಿಸಿ' ಎಂಬ ಪ್ರಶ್ನೆಗೆ ವಿಚಲಿತರಾದ ವಾಮನಚಾರ್ಯ, ಎಲ್ಲವನ್ನೂ ಈಡೇರಿಸುತ್ತಿದ್ದೇವೆ ಎಂದರು. ಈ ವೇಳೆ ಪತ್ರಕರ್ತರು ಕಪ್ಪು ಹಣ, ಯುವಕರಿಗೆ ಉದ್ಯೋಗಾವಾಕಾಶ ಮತ್ತು ರಾಮಮಂದಿರ ವಿಷಯಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಉತ್ತರಿಸಲು ಆಗದೆ ಸುಮ್ಮನಾದರು.

'ಭರವಸೆಗಳ ಬಗ್ಗೆ ಮಾತನಾಡುವ ನೀವು ನಿಮ್ಮ ಸರಕಾರ ಎಷ್ಟರ ಮಟ್ಟಿಗೆ ನಡೆದುಕೊಂಡಿದೆ ಎಂಬುದನ್ನು ತಿಳಿಸಿ' ಎನ್ನುತ್ತಿದ್ದಂತೆ 'ಆ ಪ್ರಶ್ನೆಗಳಿಗೆ ನಾನು ಉತ್ತರಿಸಲಾರೆ. ನಾನು ಕೇವಲ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಲು ಬಂದಿದ್ದೇನೆ' ಎಂದರು. ಆದರೆ ಮತ್ತಷ್ಟು ಪ್ರಶ್ನೆಗಳು ಎದುರಾಗುತ್ತಿದ್ದಂತೆ ಉತ್ತರಿಸಲಾಗದೆ ಅವರು ಅಲ್ಲಿಂದ ಹೊರನಡೆದರು.

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಮಾಧ್ಯಮ ವಕ್ತಾರ ಮಹೇಶ್, ಬಿಜೆಪಿ ಮುಖಂಡರಾದ ರಾಕೇಶ್, ಡಾ.ಪ್ರಸನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News