ಮೇ.1 ರಂದು ಚಾ.ನಗರಕ್ಕೆ ಆಗಮಿಸುತ್ತಿರುವ ಮೋದಿಗೆ ಘೇರಾವ್: ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ
ಮೈಸೂರು,ಎ.27: ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳದೆ ಹಾಗೂ ದಲಿತರ ದಮನ ನೀತಿ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಖಂಡಿಸಿ ಅವರಿಗೆ ಘೇರಾವ್ ಹಾಕಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡ್ತಿ ಮೀಸಲಾತಿ, ದಲಿತರ ದೌರ್ಜನ್ಯ ಕಾಯ್ಡೆ ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರದ ಕಾರ್ಯವೈಕರಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿರುವ ಅವರು, ಮೇ.1 ರಂದು ಚಾಮರಾಜನಗರಕ್ಕೆ ಪ್ರಧಾನಿ ಆಗಮಿಸುತ್ತಿದ್ದಾರೆ. ಎ.30 ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದರೆ ಮಾತ್ರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಅನುಮಾಡಿಕೊಡುತ್ತೇವೆ, ಇಲ್ಲದಿದ್ದರೆ ಇತರೆ ಸಂಘಟನೆಗಳೊಡಗೂಡಿ ಘೇರಾವ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಸಂವಿಧಾನ ದಲಿತರಿಗಷ್ಟೇ ಅಲ್ಲದೆ ದೇಶದ ಎಲ್ಲಾ ವರ್ಗಗಳ ಹಕ್ಕು, ಅಂತಹ ಸಂವಿಧಾನದ ಬಗ್ಗೆಯೇ ಮಾತನಾಡುವ ವ್ಯಕ್ತಿಗಳನ್ನು ಇವರು ತಮ್ಮ ಸಂಪುಟದಲ್ಲಿ ಮುಂದುವರೆಸುವ ಮೂಲಕ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಕಂಡುಬರುತ್ತಿದೆ. ಇವರಿಗೆ ನಿಜವಾಗಿಯೂ ಅಂಬೇಡ್ಕರ್ ಬಗ್ಗೆ, ಸಂವಿಧಾನದ ಬಗ್ಗೆ ಗೌರವವಿದಿದ್ದರೆ ಕೂಡಲೇ ಅನಂತಕುಮಾರ್ ಹೆಗಡೆಯನ್ನು ಪಕ್ಷದಿಂದಲೇ ವಜಾಮಾಡಬೇಕಿತ್ತು. ಆದರೆ ಆ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆಎಂದರು.
ವಿಚಾರ ಸಂಕಿರಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿಯನ್ನು ಮಾನಸಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ಎ.29 ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಿದೆ.
ಬೆಳಗಾವಿಯ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸುವರು, ಪ್ರಸ್ತಾವಿಕವಾಗಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಕಿರಂಗೂರು ಸ್ವಾಮಿ, ಮುಖ್ಯ ಅತಿಥಿಯಾಗಿ ಪ್ರೋ.ಡಿ.ಆನಂದ್, ವಕೀಲರ ಸಂಘದ ಕಾರ್ಯದರ್ಶಿ ತಿಮ್ಮಯ್ಯ, ಯಡದೊರೆ ಮಹದೇವಯ್ಯ ಇರುವರು.
'ಪ್ರಜಾಸತ್ತೆಯ ಉಳಿವಿಗಾಗಿ ಚಳವಳಿಗಳ ಜವಾಬ್ಧಾರಿ' ವಿಷಯವಾಗಿ ವಿಚಾರಗೋಷ್ಠಿ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸದ ಯಡದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ಉಮಾಮಹದೇವ್, ಟಿ.ಎಂ.ಗೋವಿಂದರಾಜು, ಉಪಸ್ಥಿತರಿದ್ದರು.