ಪ್ರೀತಿಯಿಂದ ಮಾಡಿದ ರಾಜಕೀಯ ಶಾಶ್ವತ: ಶಾಸಕ ವೈ.ಎಸ್‍ವಿ ದತ್ತ
ಬೀರೂರು, ಎ.27: ಜನತೆಯ ಪ್ರೀತಿಯ ಫಲವಾಗಿ ಈ ಕ್ಷೇತ್ರದ ಶಾಸಕನಾಗಿ 5 ವರ್ಷಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಆಡಳಿತವನ್ನು ಮೆಚ್ಚಿ ನಾನು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಾವಿರಾರು ಮಂದಿ ಸೇರಿರುವುದು ಇನ್ನಷ್ಟು ಉತ್ಸುಕನನ್ನಾಗಿ ಮಾಡಿದೆ ಎಂದು ಕಡೂರು ಕ್ಷೇತ್ರ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಮಾರ್ಗದ ಕ್ಯಾಂಪ್‍ನ ಚಕ್ಕಾಪುರದ ಚೌಡೇಶ್ವರಿ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಕ್ಷೇತ್ರ ಜಾತಿಗೆ ಮೀರಿದ ಪ್ರೀತಿಗೆ ಒಗ್ಗಿಕೊಂಡಂತಹದ್ದಾಗಿದೆ, ನಮ್ಮ ಜನ ನನ್ನ ಕೆಲಸ ಮತ್ತು ಅಭಿವೃದ್ದಿಯನ್ನು ಗಮನಿಸಿ ನನಗೆ ಪ್ರೋತ್ಸಾಹ ನೀಡಲು ನಾಮಪತ್ರ ಸಲ್ಲಿಕೆಯಂದು ಸೇರಿದ ಜನಸ್ತೋಮ ಸಾಕ್ಷಿಯಾಗಿದೆ, ನನ್ನ ಚುನಾವಣಾ ಪ್ರಚಾರ ಆತ್ಮವಿಶ್ವಾಸದಿಂದ ಕೂಡಿದೆ. ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ.ಹಣ, ತೋಳು, ಜಾತಿ ಬಲವಿಲ್ಲದ ನಾನು ಜನಸಾಮಾನ್ಯರ ಬೆಂಬಲವನ್ನು ನೋಡಿದರೆ ಹಣ ಸಂಪಾದನೆಯಲ್ಲಿ ವಿಫಲವಾಗಿ ಪ್ರೀತಿ ಸಂಪಾದನೆಯಲ್ಲಿ ಯಶಸ್ವಿಯಾಗಿದ್ದೇನೆ ಎಂಬುವುದು ಖಾತರಿಯಾಗಿದೆ ಎಂದರು.
ಎರಡು ರಾಷ್ಟ್ರೀಯ ಪಕ್ಷದ ವಿವಿಧ ಸ್ಥಾನವನ್ನು ಅಲಂಕರಿಸಿದಂತ ಪ್ರತಿಷ್ಟಿತ ರಾಷ್ಟ್ರೀಯ ನಾಯಕರುಗಳು ಸಾವಿರಾರು ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಇದರನ್ವಯ ಅವರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಸೇರಬೇಕು ಎಂದು ಅಪೇಕ್ಷಿಸಿರುವುದರಿಂದ ಬೃಹತ್ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಪಕ್ಷದ ಪ್ರಣಾಳಿಕೆಯ ಬಿಡುಗಡೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಣಾಳಿಕೆ ಸಮಿತಿಯ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ಗ್ರಾಮೀಣ ರೈತರಗೋಸ್ಕರ ಜೆಡಿಎಸ್ ಪಕ್ಷ ಆಡಳಿತವಿಡಿದ 24 ಗಂಟೆಗಳಲ್ಲಿ ರೈತರ ಎಲ್ಲಾ ವರ್ಗದ ಎಲ್ಲಾ ಬಗೆಯ ಸಾಲ ಸಂಪೂರ್ಣ ಮನ್ನಾ ಮಾಡುವ ಮತ್ತು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿರೀಕ್ಷೆಯಲ್ಲಿದ್ದೇವೆ. ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ತುಂಬುವ ಹಾಗೂ ಸ್ಥಳೀಯ ಯುವಕರುಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ,
ವಿಶೇಷವೆಂದರೆ ವೃದ್ದಾಪ್ಯರಿಗೆ, ವಿಧವಾ ವೇತನ, ಅಂಗವಿಕಲರಿಗೆ ಮತ್ತು ಗರ್ಬಿಣಿ ಸ್ತ್ರೀಯರಿಗೆ ನೀಡುವ ಮಾಸಾಶನವನ್ನು ಹೆಚ್ಚಿಸುತ್ತೇವೆ, ನೀರಾವರಿ ವಿಚಾರವಾಗಿ ಹೆಚ್.ಡಿ.ದೇವೇಗೌಡರಿಗಿಂತ ನೀರಾವರಿ ತಜ್ಞರು ಬೇಕಿಲ್ಲ, ಕಾವೇರಿ. ಮಹದಾಯಿ. ಕೃಷ್ಣ ನದಿಯ ಸಮಸ್ಯೆಯನ್ನು ಬಗೆಹರಿಸುತ್ತೇವೆ.
ಮತಯಾಚನೆಯಲ್ಲಿ ತಾಪಂ ಸದಸ್ಯ ಬ್ಯಾಗಡೇಹಳ್ಳಿ ಬಸವರಾಜ್, ಕೋಡಿಹಳ್ಳಿ ಮಹೇಶ, ಹೋಬಳಿ ಅಧ್ಯಕ್ಷ ಬಾವಿಮನೆ ಮಧು, ಪುರಸಭೆ ಸದಸ್ಯೆ ವಸಂತ ರಮೇಶ್, ಮೋಹನ್, ಯುವ ಜನತಾದಳ ತಾಲ್ಲೂಕು ಅಧ್ಯಕ್ಷ ಮುಭಾರಕ್, ಸಾಧಿಕ್, ರಮೇಶ್ ಮುಂತಾದವರಿದ್ದರು.