×
Ad

ಕಾಂಗ್ರೆಸ್ ವರಿಷ್ಟರ ಆದೇಶದಂತೆ ಚುನಾವಣಾ ಸ್ಪರ್ಧೆಯಿಂದ ಹಿಂದಕ್ಕೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಿ.ಎಂ.ಧನಂಜಯ್

Update: 2018-04-27 23:02 IST

ಕಡೂರು, ಎ.27: ಕಾಂಗ್ರೆಸ್ ಪಕ್ಷದ ವರಿಷ್ಟರ ಆದೇಶದಂತೆ ಚುನಾವಣಾ ಸ್ಪರ್ಧೆಯಿಂದ ನಾಮಪತ್ರ ಹಿಂಪಡೆದಿದ್ದೇನೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಿ.ಎಂ.ಧನಂಜಯ ತಿಳಿಸಿದರು.

ಶುಕ್ರವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಲು ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ ಕಡೇ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತು. ಆದರೂ ಇಲ್ಲಿನ ಕಾರ್ಯಕರ್ತರ ಒತ್ತಡದಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಪಕ್ಷದ ವರಿಷ್ಟರ ಒತ್ತಡ ಮತ್ತು ಆದೇಶಕ್ಕೆ ತಲೆಬಾಗಿ ಕಡೂರು ಚುನಾವಣಾ ಕಣದಿಂದ ನಿವೃತ್ತಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಿ.ಎಂ.ಧನಂಜಯ ಅವರು ಹೊರಟಾಗ ಅವರ ಜೊತೆಗಿದ್ದವರು ಭಾವುಕರಾಗಿ ಕಣ್ಣೀರಿಟ್ಟರು. ಕಡೂರಿನ ಜನತೆಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇನೆ. ನಿಮ್ಮೆಲ್ಲರ ಪ್ರೀತಿ ಮರೆಯಲಾರೆ, ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಪ್ರಯತ್ನ ನಿರಂತರ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಮಾತನಾಡಿ, ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಪಕ್ಷ ಸಂಘಟಿಸಿದ್ದ ಧನಂಜಯ ಅವರ ಬೆಂಬಲ ದೊರೆತಿರುವುದು ಉತ್ಸಾಹ ಮತ್ತು ಸ್ಥೈರ್ಯ ಹೆಚ್ಚಿಸಿದೆ. ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಧನಂಜಯ ಅವರ ಬೆಂಬಲಿಗರಾದ ಪುಟ್ಟೇಗೌಡ, ಎಂ.ಕೆ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News