×
Ad

ಚಲುವರಾಯಸ್ವಾಮಿ ಸಂಧಾನ ಯಶಸ್ವಿ: ಕಣದಿಂದ ಹಿಂದೆ ಸರಿದ ಮಾಜಿ ಶಾಸಕ ಎಚ್.ಬಿ.ರಾಮು

Update: 2018-04-27 23:29 IST

ಮಂಡ್ಯ, ಎ.27: ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮನವಿಗೆ ಸ್ಪಂದಿಸಿರುವ ಮಾಜಿ ಶಾಸಕ ಎಚ್.ಬಿ.ರಾಮು ನಾಮಪತ್ರ ವಾಪಸ್ ಪಡೆದಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.

ನಗರದ ಬ್ರಾಹ್ಮಣ ಸಭಾ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಎಚ್.ಬಿ.ರಾಮು ಹಿತೈಷಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಚಲುವರಾಯಸ್ವಮಿ ರಾಮು ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಮೊದಲು ಮಾತನಾಡಿದ ರಾಮು, ದಿವಂಗತ ಎಸ್.ಡಿ.ಜಯರಾಂ ಅವರು ನನಗೆ ರಾಜಕೀಯವಾಗಿ ಜನ್ಮ ನೀಡಿದರು. ಶಾಸಕ ಅಂಬರೀಶ್ ಅವರು ವೇದಿಕೆ ಕಲ್ಪಿಸಿಕೊಟ್ಟರು. ಅಂದಿನಿಂದ ಪಕ್ಷದಲ್ಲಿ ದುಡಿದಿದ್ದೇನೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನನ್ನನ್ನು ಕಡೆಗಣಿಸಲಾಯಿತು. ಈಗಲೂ ಪರಿಗಣಿಸದ ಕಾರಣ ಪಕ್ಷೇತರನಾಗಿ ಉಮೇದುವಾರಿಕೆ ಸಲ್ಲಸಿದ್ದೇನೆ. ಚಲುವರಾಯಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು ಅವರೇಳಿದಂತೆ ಮಾಡುತ್ತೇನೆ ಎಂದು ಅವರು ಹೇಳಿದರು.

ಚಲುವರಾಯಸ್ವಾಮಿ ಮಾತನಾಡಿ, ರಾಮು ಅವರು ಆರಂಭದಲ್ಲಿ ಟಿಕೆಟ್‍ಗೆ ಆಸಕ್ತಿ ತೋರಿದ್ದರೆ ಪ್ರಯತ್ನಿಸಬಹುದಿತ್ತು. ಅಂಬರೀಶ್ ಹಿಂದೆ ಸರಿದ ನಂತರ ಬಯಸಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರವಿಕುಮಾರ್ ಗೌಡರಿಗೆ ಟಿಕೆಟ್ ಲಭಿಸಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರು ಎಚ್.ಬಿ.ರಾಮು ಅವರನ್ನು ವಾಪಸ್ ಪಡೆಯುವಂತೆ ಸೂಚಿಸಿದ್ದು, ಮುಂದಿನ ದಿನಗಳಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ನಾನೂ ಜತೆಯಲ್ಲಿರುತ್ತೇನೆ ಎಂದು ಅಭಯ ನೀಡಿದರು.

ಅಂತಿಮವಾಗಿ, ಚಲುವರಾಯಸ್ವಾಮಿ ಅವರ ಭರವಸೆಗೆ ಮನ್ನಣೆ ನೀಡಿದ ಎಚ್.ಬಿ.ರಾಮು, ಚುನಾವಣಾ ಕಣದಿಂದ ಹಿಂದೆ ಸರಿದು ಗಣಿಗ ರವಿಕುಮಾರಗೌಡರ ಬೆಂಬಲಿಸಲು ಪ್ರಕಟಿಸಿ, ನಂತರ ಚುನಾವಣಾಧಿಕಾರಿ ಬಳಿಗೆ ತೆರಳಿ ನಾಮಪತ್ರ ವಾಪಸ್ ಪಡೆದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲಗಳು ನಿವಾರಣೆಯಾಗಿವೆ. ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಸಹಕರಿಸಬೇಕು ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು.

ಅಭ್ಯರ್ಥಿ ರವಿಕುಮಾರ್‍ಗೌಡ, ಕೆಪಿಸಿಸಿ ಸದಸ್ಯ ಸಚ್ಚಿದಾನಂದ, ತ್ಯಾಗರಾಜು, ಬೋರೇಗೌಡ, ಸಿ.ಕೆ.ನಾಗರಾಜು, ಬೋರೇಗೌಡ, ಕಂಬದಹಳ್ಳಿ ಪುಟ್ಟಸ್ವಾಮಿ, ಸತೀಶ್, ಅಮ್ಜದ್ ಪಾಷ, ಶಂಕರ್, ಮಧು, ದೇವರಾಜು, ಜಗದೀಶ್, ಪ್ರಕಾಶ್, ಚಂದ್ರು, ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News