ಸುಳ್ಳುಸುದ್ದಿಗಳೆಂಬ ಖೆಡ್ಡಾ

Update: 2018-04-28 04:12 GMT

ಕಳೆದೆರಡು ದಿನಗಳಿಂದ ಒಂದು ಸುದ್ದಿ ಕೇರಳವೂ ಸೇರಿದಂತೆ ದೇಶಾದ್ಯಂತ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ‘‘ಕೇರಳದಲ್ಲಿ ಹಿಂದೂ ಮಹಿಳೆಗೆ ತೀವ್ರ ಹಲ್ಲೆ ನಡೆಸಿ ದೇವರ ಮೂರ್ತಿ ಧ್ವಂಸ’’ ಎನ್ನುವ ಟ್ವೀಟ್ ‘ಶಂಖನಾದ’ ಹೆಸರಿನಲ್ಲಿ ಹರಡಿಕೊಂಡಿದೆ. ‘‘ಬಾಲಿವುಡ್ ಈ ಕುರಿತಂತೆ ಯಾಕೆ ಮೌನವಾಗಿದೆ?’’ ಎಂದೂ ಶಂಖನಾದ ಪ್ರಶ್ನಿಸಿದೆ. ಕಥುವಾ ಘಟನೆಯನ್ನು ಪ್ರತಿಭಟಿಸಿ ನಡೆದ ಧರಣಿಯ ಸಂದರ್ಭದಲ್ಲಿ ಹಿಂದೂ ದೇವಸ್ಥಾನಗಳನ್ನು ನಾಶ ಪಡಿಸಲಾಗಿದೆ ಎಂಬ ಉದ್ವಿಗ್ನ ಟ್ವೀಟ್‌ನ್ನೂ ಇದೇ ‘ಶಂಖನಾದ’ ಮಾಡಿದೆ. ವಿಪರ್ಯಾಸವೆಂದರೆ, ಈ ಟ್ವೀಟ್‌ನ್ನು ನಂಬಿ ಹಲವು ಗಣ್ಯರೂ ಪ್ರತಿಕ್ರಿಯಿಸಿದ್ದಾರೆ. ಜನಸಾಮಾನ್ಯರು ಈ ಘಟನೆಯನ್ನು ಕಥುವಾ ಘಟನೆಗೆ ಸಮೀಕರಿಸಿ, ಜಾತ್ಯತೀತತೆಯ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಕಥುವಾ ಅತ್ಯಾಚಾರವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುವುದಕ್ಕೂ ಈ ಟ್ವೀಟ್‌ನ್ನು ಬಳಸಿಕೊಳ್ಳುತ್ತಿದ್ದಾರೆ.

ವಿಪರ್ಯಾಸವೆಂದರೆ ಈ ಸುದ್ದಿಯೇ ಹಸಿ ಸುಳ್ಳು. ಈ ಸುದ್ದಿಯ ಜೊತೆಗೆ ಪ್ರಕಟಿಸಿರುವ ಫೋಟೊಗಳು ಭಾರತಕ್ಕೆ ಸಂಬಂಧಿಸಿದ್ದೇ ಅಲ್ಲ. ‘ಆಲ್ಟ್ ನ್ಯೂಸ್’ನ ಪತ್ರಕರ್ತರು ಈ ಸುದ್ದಿಯ ಸತ್ಯಾಸತ್ಯತೆಯನ್ನು ಶೋಧಿಸಿದಾಗ ಆಘಾತಕಾರಿ ಅಂಶ ಬಹಿರಂಗವಾಯಿತು. ಶಂಖನಾದ ಹರಡಿರುವ ಸುದ್ದಿ, ಫೋಟೋಗಳು ಬಾಂಗ್ಲ್ಲಾದೇಶದ ಚಿತ್ತಗಾಂಗ್ ಎಂಬಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು. ಅದೂ ಆರು ತಿಂಗಳು ಹಳೆಯದು. ಚಿತ್ತಗಾಂಗ್ ಜಿಲ್ಲೆಯಲ್ಲಿ ವಾಸಿಸುವ ಈ ಮಹಿಳೆಯ ಮೇಲೆ ನೆರೆಯ ಪ್ರದೀಪ್ ಘೋಷ್ ಮತ್ತು ಆತನ ಮಗ ವಿಶ್ವಜೀತ್ ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ದೇವರ ವಿಗ್ರಹಗಳನ್ನೂ ಚೆಲ್ಲಾಪಿಲ್ಲಿಗೊಳಿಸಿದ್ದರು. ಬಾಂಗ್ಲಾದೇಶಿ ಫೇಸ್‌ಬುಕ್‌ನಲ್ಲಿ ಈ ಸುದ್ದಿ ಪ್ರಕಟವಾಗಿತ್ತು. ಅದನ್ನೇ ತಿರುಚಿ ಶಂಖನಾದ ಎನ್ನುವ ಗುಂಪು, ದೇಶದ ಜನರನ್ನು ತಪ್ಪುದಾರಿಗೆ ಎಳೆದಿತ್ತು. ‘ವಿ ಸಪೋರ್ಟ್ ನರೇಂದ್ರ ಮೋದಿ’ ಎಂಬ ಗುಂಪು ಕೂಡ ಈ ಸುದ್ದಿಯನ್ನು ಹಂಚಿಕೊಂಡಿದೆ. ಶಂಖನಾದ ಹೆಸರಿನಲ್ಲಿ ಈ ಹಿಂದೆಯೂ ಇಂತಹದ್ದೇ ಉದ್ವಿಗ್ನಕಾರಿ ಸುಳ್ಳುಸುದ್ದಿಗಳು ಹರಡಲಾಗಿದೆ.

ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ಸಂಬಂಧಿಸಿದವರು ಅದನ್ನು ಅಳಿಸುತ್ತಾರಾದರೂ ಅಷ್ಟರಲ್ಲಿ ಅದು ಸಾಕಷ್ಟು ಪ್ರಮಾಣದಲ್ಲಿ ಹಂಚಿ ಹೋಗಿರುತ್ತದೆ. 2015ರಲ್ಲಿ ನಡೆದ ಒಂದು ಘಟನೆಯನ್ನು ಇದೀಗ ಮತ್ತೆ ಕೆಲವು ಗುಂಪುಗಳು ಹಂಚಿಕೊಳ್ಳುತ್ತಿವೆ ಮತ್ತು ಅದನ್ನು ಇತ್ತೀಚೆಗೆ ನಡೆದ ಘಟನೆ ಎಂದು ಹೇಳಿ ಜನರನ್ನು ವಂಚಿಸುತ್ತಿವೆ. ‘ಗೀತಾ ಎನ್ನುವ ಹೆಣ್ಣು ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಕೆಲವರು ಸುದ್ದಿಯನ್ನು ಹರಡುತ್ತಿದ್ದಾರೆ. ಅಧಿಕೃತವಾಗಿ ಯಾವುದೇ ಮೂಲಗಳು ಇದನ್ನು ಸ್ಪಷ್ಟ ಪಡಿಸುತ್ತಿಲ್ಲ. ಕಥುವಾ ಘಟನೆಯ ಬಳಿಕ ಇಂತಹ ವದಂತಿಗಳನ್ನು ಕೆಲವು ದುಷ್ಟ ಶಕ್ತಿಗಳು ಅತ್ಯಾಸಕ್ತಿಯಿಂದ ಹಂಚುತ್ತಿವೆ ಮತ್ತು ಜಾತ್ಯತೀತರು, ಪ್ರಗತಿಪರರೆನಿಸಿಕೊಂಡವರೇ ಆ ವದಂತಿಯ ಜಾಲಕ್ಕೆ ಬಿದ್ದು ಪ್ರತಿಕ್ರಿಯಿಸುತ್ತಿದ್ದಾರೆ. ಇತ್ತೀಚೆಗೆ ‘ಪೋಸ್ಟ್‌ಕಾರ್ಡ್’ ಎನ್ನುವ ವೆಬ್‌ಸೈಟ್ ಇದೇ ಕಾರಣಕ್ಕೆ ಸುದ್ದಿಯಾಗಿತ್ತು. ಅಪಘಾತದಲ್ಲಿ ಗಾಯಗೊಂಡ ಜೈನ ಮುನಿಯ ಫೋಟೊಗಳನ್ನು ಹಾಕಿ, ಮುಸ್ಲಿಮರಿಂದ ಹಲ್ಲೆಗೊಳಗಾಗಿರುವ ಜೈನಸನ್ಯಾಸಿ ಎಂದು ಪ್ರಕಟಿಸಿ ಸಮಾಜದಲ್ಲಿ ಉದ್ವಿಗ್ನವಾತಾವರಣ ನಿರ್ಮಾಣ ಮಾಡಲು ಯತ್ನಿಸಿತ್ತು. ಬಳಿಕ ಇದೇ ಕಾರಣಕ್ಕಾಗಿ ಅದರ ಮುಖ್ಯಸ್ಥನ ಮೇಲೆ ಪ್ರಕರಣ ದಾಖಲಾಗಿ, ಬಂಧಿಸಲಾಯಿತು. ವಿಪರ್ಯಾಸವೆಂದರೆ, ಈತನನ್ನು ಒಂದು ರಾಜಕೀಯ ಪಕ್ಷದ ಮುಖಂಡರು ಬಹಿರಂಗವಾಗಿ ಸಮರ್ಥಿಸಿಕೊಂಡರು.

ಆತನ ರಕ್ಷಣೆಗೆ ನಿಂತರು. ಅದರಲ್ಲಿ ಸಂಸದರಾಗಿರುವ ಪ್ರತಾಪಸಿಂಹ ಕೂಡ ಸೇರಿದ್ದಾರೆ. ಇದಾದ ಮೂರೇ ದಿನಗಳಲ್ಲಿ ಕೇಂದ್ರ ಸರಕಾರ ರಚಿಸಿದ ಮಾಧ್ಯಮಗಳ ಮೇಲಿನ ಕಣ್ಗಾವಲು ಸಮಿತಿಯಲ್ಲಿ ಈ ಪ್ರತಾಪಸಿಂಹರ ಸದಸ್ಯನಾಗಿ ಆಯ್ಕೆಯಾದರು. ಸಾಮಾಜಿಕ ತಾಣಗಳಲ್ಲಿ ನಕಲಿ ಖಾತೆಯನ್ನು ತೆರೆದು ಯಾರೂ ಸುಳ್ಳು ಸುದ್ದಿಗಳನ್ನು ಹರಡಬಹುದು ಎನ್ನುವಂತಹ ವಾತಾವರಣವೊಂದು ಮೂಡಿದೆ. ರಾಜಕೀಯ ಹಿತಾಸಕ್ತಿಯುಳ್ಳ ಕೆಲವು ನಿರ್ದಿಷ್ಟ ಸಂಘಟನೆಗಳು ಇದರ ಹಿಂದೆ ಕೆಲಸ ಮಾಡುತ್ತಿವೆ. ಶಂಖನಾದ, ಪೋಸ್ಟ್‌ಕಾರ್ಡ್‌ನಂತಹ ‘ನಕಲಿ’ಗಳ ಜೊತೆಗೆ ಸಂಘಪರಿವಾರದ ಕೆಲವು ಸಂಘಟನೆಗಳು ಕೆಲಸ ಮಾಡುತ್ತಿವೆ. ಇವರ ಮುಖ್ಯ ಉದ್ದೇಶ, ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು. ಒಂದೆಡೆ ಮೋದಿ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ನೋಟು ನಿಷೇಧದ ದುಷ್ಪರಿಣಾಮ ಮುಂದುವರಿದಿದೆ. ಎಟಿಎಂನಲ್ಲಿ ಹಣ ಸಿಗದೇ ಜನರು ಕಂಗಾಲಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಗಳೂ ದಿನದಿಂದ ದಿನಕ್ಕೆ ಏರುತ್ತಿವೆ. ಜನರು ಈ ವಿಷಯಗಳನ್ನು ಚರ್ಚಿಸುವ ಹೊತ್ತಿಗೆ ಜನರನ್ನು ಕೆರಳಿಸುವ ಉದ್ವಿಗ್ನಕಾರಿ ಸುದ್ದಿಗಳನ್ನು ಹರಡಿ ಅವರ ಗಮನ ಬೇರೆ ದಿಕ್ಕಿಗೆ ಹೊರಳುವಂತೆ ಮಾಡುವುದು ಇವರ ಕೆಲಸ. ಕಥುವಾ ಪ್ರಕರಣ ಸಂಭವಿಸಿ ಅದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ಸರಕಾರದ ಮಾನ ಹರಾಜಾಯಿತು. ಜಾತಿ ಭೇದ ಮರೆತು ಇದನ್ನು ಜನರು ಖಂಡಿಸಿದರು.

ಧರ್ಮದ ಹೆಸರಿನಲ್ಲಿ, ಒಂದು ಸಮುದಾಯವನ್ನು ದ್ವೇಷಿಸಿದ ಹಿನ್ನೆಲೆಯಲ್ಲಿ ನಡೆದ ಕೃತ್ಯವಾಗಿರುವುದರಿಂದ ಬರೇ ಅತ್ಯಾಚಾರವಾಗಿಯಷ್ಟೇ ಇದು ಚರ್ಚೆಯಾಗಲಿಲ್ಲ. ಈ ಕೃತ್ಯವನ್ನು ಸಮರ್ಥಿಸಿ ವಕೀಲರು ಬೀದಿಗಿಳಿದದ್ದು, ಆರೋಪಿಗಳನ್ನು ರಕ್ಷಿಸಲು ಯತ್ನಿಸಿದ್ದು ಇವೆಲ್ಲವೂ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸಾಕಷ್ಟು ಮುಖಭಂಗವನ್ನುಂಟು ಮಾಡಿತು. ಕಥುವಾ ಪ್ರಕರಣವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿಯೇ ಶಂಖನಾದದಂತಹ ಸಂಘಟನೆಗಳು ಸುಳ್ಳು ಸುದ್ದಿಗಳನ್ನು ಹರಡತೊಡಗಿದವು. ಆ ಮೂಲಕ, ಪ್ರತಿಭಟನಾಕಾರರನ್ನು ಕಟ್ಟಿ ಹಾಕುವುದು ಅವರ ಉದ್ದೇಶವಾಗಿತ್ತು. ‘ಕಥುವಾ ಪ್ರಕರಣವನ್ನು ಖಂಡಿಸುವವರು ಇದನ್ನೇಕೆ ಖಂಡಿಸುತ್ತಿಲ್ಲ?’ ಎಂಬ ಪ್ರಶ್ನೆಯನ್ನು ಎತ್ತಿ ಚರ್ಚೆಯನ್ನು ವಿಷಯಾಂತರಗೊಳಿಸುವ ಪ್ರಯತ್ನ ಇವರದಾಗಿತ್ತು. ಅಷ್ಟೇ ಏಕೆ, ‘ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಕೊಲೆಯಾದ ಬಾಲಕಿಯ ಮೇಲೆ ಅತ್ಯಾಚಾರ ನಡೆದೇ ಇಲ್ಲ’ ಎಂಬ ವದಂತಿಗಳನ್ನೂ ಕೆಲವು ವೆಬ್‌ಸೈಟ್‌ಗಳು ಹರಿಯಬಿಟ್ಟವು. ಅಂದರೆ ಇವೆಲ್ಲವೂ ಪರೋಕ್ಷವಾಗಿ ಕಥುವಾ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಮತ್ತು ಸಮರ್ಥಿಸುವ ಭಾಗವೇ ಆಗಿತ್ತು. ನರೇಂದ್ರಮೋದಿಯವರು ಮಾಧ್ಯಮಗಳಿಗೆ ‘ಕಣ್ಗಾವಲು ಸಮಿತಿ’ಯೊಂದನ್ನು ಈಗಾಗಲೇ ಘೋಷಿಸಿದ್ದಾರೆ.

ಶಂಖನಾದ, ಪೋಸ್ಟ್‌ಕಾರ್ಡ್‌ನಂತಹ ನಕಲಿಗಳು ಅತ್ಯಂತ ಉದ್ವಿಗ್ನಕಾರಿ ಸುಳ್ಳುಗಳನ್ನು ಹರಡುತ್ತಿದ್ದರೂ ಅದರ ಬಗ್ಗೆ ಸಮಿತಿ ಕುರುಡಾಗಿದೆ. ಈ ಎಲ್ಲ ವದಂತಿಗಳು ಸರಕಾರಕ್ಕೆ ಮತ್ತು ಸಂಘ ಪರಿವಾರಕ್ಕೆ ಪೂರಕವಾಗಿರುವುದರಿಂದಲೇ ಅದರ ಕುರಿತಂತೆ ಧೃತರಾಷ್ಟ್ರ ನೀತಿಯನ್ನು ಸರಕಾರ ಅನುಸರಿಸುತ್ತಿದೆ. ಇದೇ ಸಂದರ್ಭದಲ್ಲಿ ಸತ್ಯದ ಹಿಂದೆ ಬಿದ್ದ ಅಸಲಿ ಮಾಧ್ಯಮಗಳಿಗೆ ಸಾವಿರ ಅಡೆ ತಡೆಗಳನ್ನು ಒಡ್ಡ ತೊಡಗಿದೆ. ಈ ಎಲ್ಲ ಕಾರಣಗಳಿಂದ ಮಾಧ್ಯಮಗಳು ಹೇಗೆ ತನಗೆ ತಾನೇ ಲಕ್ಷ್ಮಣ ರೇಖೆಯನ್ನು ವಿಧಿಸಿಕೊಳ್ಳಬೇಕೋ ಹಾಗೆಯೇ ಓದುಗರೂ ತಮಗೊಂದು ಲಕ್ಷ್ಮಣ ರೇಖೆಯನ್ನು ವಿಧಿಸಿಕೊಳ್ಳಬೇಕಾಗಿದೆ. ಇಂದು ಯಾವುದೇ ವಾಟ್ಸ್ ಆ್ಯಪ್ ಅಥವಾ ಫೇಸ್‌ಬುಕ್‌ನ ವರದಿಗಳಿಗೆ ಪ್ರತಿಕ್ರಿಯಿಸುವ ಮೊದಲು ಪ್ರಜ್ಞಾವಂತರು ಅದರ ಮೂಲ ಎಷ್ಟು ನಂಬಲರ್ಹ ಎನ್ನುವುದನ್ನು ಖಚಿತ ಪಡಿಸಿ ಪ್ರತಿಕ್ರಿಯಿಸಬೇಕು.ಅಷ್ಟೇ ಅಲ್ಲ, ಉದ್ವಿಗ್ನಕಾರಿ ಸುಳ್ಳು ಸುದ್ದಿಗಳು ಗಮನಕ್ಕೆ ಬಂದರೆ ತಕ್ಷಣ ಅದರ ಕುರಿತಂತೆ ಸಾಮಾಜಿಕ ತಾಣಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು. ಸಾಮಾಜಿಕ ತಾಣಗಳೇ ಸುಳ್ಳು ಸುದ್ದಿಗಳನ್ನು ಹರಡುವ ಖೆಡ್ಡಾಗಳಾಗುತ್ತಿರುವಾಗ, ಪ್ರತಿ ಸುದ್ದಿಗಳನ್ನು ಎರಡೆರಡು ಬಾರಿ ಪರೀಕ್ಷಿಸಿಯೇ ಸ್ವೀಕರಿಸಬೇಕು. ಇಲ್ಲವಾದರೆ ನಕಲಿಗಳು ತೋಡಿದ ಹೊಂಡಕ್ಕೆ ಪ್ರಜ್ಞಾವಂತರೂ ಬಿದ್ದು ನರಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News