ಇನ್ನೊಂದು ಡೋಕಾ ಲಾ ಬಿಕ್ಕಟ್ಟು ತಪ್ಪಿಸುವಂತೆ ತಮ್ಮ ಸೇನೆಗಳಿಗೆ ಮೋದಿ,ಕ್ಸಿ ಮಾರ್ಗದರ್ಶನ

Update: 2018-04-28 14:19 GMT

ವುಹಾನ್(ಚೀನಾ),ಎ.28: ಉಭಯ ರಾಷ್ಟ್ರಗಳ ನಡುವಿನ ವಿವಾದಿತ ಗಡಿಯಲ್ಲಿ ಡೋಕಾ ಲಾದಂತಹ ಇನ್ನೊಂದು ಮಿಲಿಟರಿ ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಸೇನೆಗಳಿಗೆ ವ್ಯೂಹಾತ್ಮಕ ಮಾರ್ಗದರ್ಶನವನ್ನು ಒದಗಿಸಲಿದ್ದಾರೆ. 

 ವುಹಾನ್‌ನಲ್ಲಿ ಶನಿವಾರ ಅಂತ್ಯಗೊಂಡ ಎರಡು ದಿನಗಳ ಅನೌಪಚಾರಿಕ ಶೃಂಗದಲ್ಲಿ ಭಾರತ ಮತ್ತು ಚೀನಾ ಅಫಘಾನಿಸ್ತಾನದಲ್ಲಿ ಜಂಟಿ ಆರ್ಥಿಕ ಯೋಜನೆಗಾಗಿ ಶ್ರಮಿಸಲೂ ನಿರ್ಧರಿಸಿವೆ. ಇದು ಚೀನಾದ ಆಪ್ತಮಿತ್ರ ಹಾಗೂ ಭಾರತದ ಬದ್ಧವೈರಿ ಪಾಕಿಸ್ತಾನಕ್ಕೆ ಕಳವಳವನ್ನುಂಟು ಮಾಡಬಹುದು.

ಉಭಯ ನಾಯಕರ ನಡುವಿನ ಹಲವಾರು ಮಾತುಕತೆಗಳ ಸಂದರ್ಭ ಭೀತಿವಾದ,ಹವಾಮಾನ ಬದಲಾವಣೆ ಮತ್ತು ಅವರು ಸಮಾನ ಅಭಿಪ್ರಾಯಗಳನ್ನು ಹೊಂದಿರುವ ಇತರ ಅಂತರರಾಷ್ಟ್ರೀಯ ವಿಷಯಗಳು ಪ್ರಸ್ತಾವಗೊಂಡವು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ಅವರು,ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಅವರು ವ್ಯೂಹಾತ್ಮಕ ಮತ್ತು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಭಾರತ-ಚೀನಾ ಸಂಬಂಧಗಳಲ್ಲಿಯ ಬೆಳವಣಿಗೆಗಳ ಪುನರ್‌ಪರಿಶೀಲನೆ ನಡೆಸಿದರು ಎಂದು ತಿಳಿಸಿದರು.

ಪರಸ್ಪರರ ಭಾವನೆಗಳು,ಕಾಳಜಿಗಳು ಮತ್ತು ಆಕಾಂಕ್ಷೆಗಳನ್ನು ಗೌರವಿಸುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಶಾಂತಿಯುತ ಚರ್ಚೆಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ಪಕ್ವತೆ ಮತ್ತು ವಿವೇಚನೆಯನ್ನು ಉಭಯ ರಾಷ್ಟ್ರಗಳು ಹೊಂದಿವೆ ಎನ್ನುವುದನ್ನೂ ಈ ನಾಯಕರು ಒಪ್ಪಿಕೊಂಡರು ಎಂದ ಗೋಖಲೆ,ಗಡಿ ಮಾತುಕತೆಗಳ ಕುರಿತ ಉಭಯ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳು ನ್ಯಾಯಯುತ ಮತ್ತು ಪರಸ್ಪರರಿಗೆ ಒಪ್ಪಿತ ಇತ್ಯರ್ಥಕ್ಕಾಗಿ ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಎಂದು ಮೋದಿ ಮತ್ತು ಕ್ಸಿ ಅಭಿಪ್ರಾಯಿಸಿದರು ಎಂದು ತಿಳಿಸಿದರು.

ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಅಭಿವೃದ್ಧಿಯ ಹೆಚ್ಚಿನ ಹಿತಾಸಕ್ತಿಯಲ್ಲಿ ಭಾರತ-ಚೀನಾ ಗಡಿಯ ಎಲ್ಲ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವದರ ಮಹತ್ವಕ್ಕೆ ಉಭಯ ನಾಯಕರು ಒತ್ತು ನೀಡಿದರು ಎಂದರು.

ಉಭಯ ರಾಷ್ಟ್ರಗಳು ಒಪ್ಪಿಕೊಂಡಿರುವ ವಿವಿಧ ವಿಶ್ವಾಸ ನಿರ್ಮಾಣ ಕ್ರಮಗಳನ್ನು ಶ್ರದ್ಧೆಯಿಂದ ಜಾರಿಗೊಳಿಸುವಂತೆ ಉಭಯ ನಾಯಕರು ತಮ್ಮ ಸೇನೆಗಳಿಗೆ ನಿರ್ದೇಶ ನೀಡಿದರು ಎಂದು ತಿಳಿಸಿದ ಗೋಖಲೆ,ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯೂ ಚರ್ಚೆಯ ಮಹತ್ವದ ಭಾಗವಾಗಿತ್ತು ಎಂದರು. ಎರಡು ದಿನಗಳ ಶೃಂಗಸಭೆಯಲ್ಲಿ ಮೋದಿ ಮತ್ತು ಕ್ಸಿ ಆರು ಸುತ್ತುಗಳ ಮಾತುಕತೆಗಳನ್ನು ನಡೆಸಿದ್ದು,ವ್ಯಾಪಕ ವಿಷಯಗಳನ್ನು ಚರ್ಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News