ಐಟಿ ದಾಳಿಯ ಹಿಂದೆ ಪ್ರಧಾನಿ ಮೋದಿ, ಅಮಿತ್ ಶಾ ಕೈವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-04-29 13:22 GMT

ಬಾಗಲಕೋಟೆ, ಎ.29: ಕಾಂಗ್ರೆಸ್ ನಾಯಕರು, ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಆಪ್ತರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ(ಐಟಿ) ಇಲಾಖೆಯ ದಾಳಿಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಐಟಿ ದಾಳಿಯ ಹಿಂದೆ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈವಾಡವಿದೆ. ಈ ಸೇಡಿನ ರಾಜಕಾರಣವು ಮುಂದಿನ ದಿನಗಳಲ್ಲಿ ಅವರಿಗೆ ತಿರುಗು ಬಾಣ ಆಗಲಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ ಎಂದಿರುವ ಅಮಿತ್ ಶಾಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅಮಿತ್ ಶಾ ಒಬ್ಬ ದೊಡ್ಡ ನಾಟಕಕಾರ. ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಸುಳ್ಳು ಹೇಳುವುದೇ ಬಿಜೆಪಿಯವರ ಆಸ್ತಿ. ರಾಜ್ಯದಲ್ಲಿ ಸುನಾಮಿ ಇದ್ದರೆ ಅದು ಬಿಜೆಪಿ ವಿರುದ್ಧ ಇದೆ ಎಂದರು.

ಕೂಡಲ ಸಂಗಮಕ್ಕೆ ಭೇಟಿ ನೀಡಿದ ಅಮಿತ್ ಶಾ, ಬಸವಣ್ಣನವರ ಐಕ್ಯ ಮಂಟಪಕ್ಕೆ ಭೇಟಿ ನೀಡದಿರುವ ವಿಚಾರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ, ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇಲ್ಲ. ಬಸವಣ್ಣನ ಮೇಲೆ ಅವರಿಗೆ ಗೌರವ ಇಲ್ಲ. ಹಾಗಾಗಿ, ಬಸವಣ್ಣನ ಐಕ್ಯ ಮಂಟಪಕ್ಕೆ ಹೋಗಿಲ್ಲ ಎಂದರು.

ಯಡಿಯೂರಪ್ಪನವರಿಗೆ ಚೆಕ್ ಮೂಲಕ ಲಂಚ ತಿಂದು ಜೈಲಿಗೆ ಹೋಗೋಕೆ ಕಾಂಗ್ರೆಸ್ ನವರು ಹೇಳಿದ್ರಾ ? ನನ್ನನ್ನು ಯಡಿಯೂರಪ್ಪ ಜೈಲಿಗೆ ಕಳುಹಿಸುವುದಿರಲಿ, ಮೊದಲು ಅವರು ತಮ್ಮ ವಿರುದ್ಧದ ಪ್ರಕರಣಗಳಿಂದ ಹೊರಗೆ ಬರಲಿ ಎಂದು ಸಿದ್ದರಾಮಯ್ಯ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ವ್ಯಕ್ತಿಯನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇದರ ಅರ್ಥ ಏನು ? ಬಾದಾಮಿಯಲ್ಲಿ ಯಾವ ಮತ ವಿಭಜನೆಯೂ ಆಗಿಲ್ಲ. ಮೇ 5ರಂದು ಒಂದು ದಿನ ಮಾತ್ರ ಬಾದಾಮಿಯಲ್ಲಿ ಪ್ರಚಾರಕ್ಕೆ ಬರುತ್ತೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News