ಸಂವಿಧಾನ ಬದಲಾದರೆ ಬಸವಣ್ಣ, ಅಂಬೇಡ್ಕರ್ ಹೇಳಿದ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ: ಸಿ.ಎಂ ಸಿದ್ದರಾಮಯ್ಯ
ಬಾಗಲಕೋಟೆ, ಎ.29: ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ದಲಿತರನ್ನು ನಾಯಿಗಳಿಗೆ ಹೋಲಿಕೆ ಮಾಡುತ್ತಾರೆ. ಅಲ್ಲದೆ, ಈ ನಾಡಿನ ಸಾಹಿತಿಗಳಿಗೆ ಅಪ್ಪ ಅಮ್ಮ ಯಾರೂ ಎಂಬುದೆ ಗೊತ್ತಿಲ್ಲ ಎನ್ನುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಗಾರಿದರು.
ರವಿವಾರ ನಗರದ ಮುಧೋಳದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅನಂತ್‌ಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ನಾಲಾಯಕ್. ಇಂತಹ ಕೀಳುಮಟ್ಟದ ನಾಲಿಗೆ ಇರುವವರನ್ನು ಪ್ರಧಾನಿ ನರೇಂದ್ರಮೋದಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆತನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರಲ್ಲಿ ನಾನು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಸಾಮಾಜಿಕ ನ್ಯಾಯ, ಮೀಸಲಾತಿ ವಿರೋಧಿ ಬಿಜೆಪಿಗೆ ಒಂದು ಮತವನ್ನು ನೀಡಬೇಡಿ ಎಂದು ಸಿದ್ದರಾಮಯ್ಯ ಕೋರಿದರು.
ಸಂವಿಧಾನ ಬದಲಾವಣೆಯಾದರೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವ ಉಳಿಯುವುದಿಲ್ಲ. ಸಮಾಜದಲ್ಲಿ ಸಾಮರಸ್ಯ ಇರಲ್ಲ, ಬಸವಣ್ಣ, ಅಂಬೇಡ್ಕರ್ ಹೇಳಿದ ಸಮ ಸಮಾಜ ನಿರ್ಮಾಣವಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಮೇ 12ರಂದು ನಡೆಯುವ ಚುನಾವಣೆ, ಅನೇಕ ಕಾರಣಗಳಿಂದ ಮಹತ್ವದಾಗಿದೆ. ಈ ಚುನಾವಣೆಯು ಇಡೀ ದೇಶದ ಗಮನ ಸೆಳೆದಿದ್ದು, ನೀವು ತೆಗೆದುಕೊಳ್ಳುವ ತೀರ್ಮಾನ ರಾಜಕೀಯ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಸುಭದ್ರ ಸರಕಾರ ನೀಡಲು ಆಗಲಿಲ್ಲ. ಮೂವರು ಮುಖ್ಯಮಂತ್ರಿಗಳು ಬದಲಾದರು. ಆದರೆ, ನಾವು ಐದು ವರ್ಷ ಸುಭದ್ರ ಸರಕಾರ ನೀಡಿದ್ದೇವೆ. ದೇವರಾಜ ಅರಸು ನಂತರ ಐದು ವರ್ಷ ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿ ನಾನು ಎಂದು ಅವರು ಹೇಳಿದರು.
ಯಡಿಯೂರಪ್ಪ ನೇರವಾಗಿ ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗಿದ್ದಕ್ಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಅವರ ಜೊತೆಯಲ್ಲಿ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಜೈಲಿಗೆ ಹೋಗಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಜೈಲಿಗೆ ಬೀಗತನ ಮಾಡಲು ಹೋಗಿದ್ರಾ ? ಎಂದು ಅವರು ವ್ಯಂಗ್ಯವಾಡಿದರು.
ಐದು ವರ್ಷ ಹಗರಣ ರಹಿತ ಸರಕಾರ ನೀಡಿದಕ್ಕಾಗಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬಾರದು ಎಂದು ದೇವೇಗೌಡ, ಕುಮಾರಸ್ವಾಮಿ, ನರೇಂದ್ರಮೋದಿ, ಅಮಿತ್ ಶಾ, ಯಡಿಯೂರಪ್ಪ ಎಲ್ಲರೂ ನನ್ನ ಮೇಲೆ ಬಾಣ ಬಿಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. ದಲಿತರ ಮನೆಗೆ ಹೋಗಿ ಹೊಟೇಲ್‌ನಿಂದ ತಿಂಡಿ ತರಿಸಿಕೊಂಡು ತಿನ್ನುವ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದೆಯಾ ? ಅಧಿಕಾರದಲ್ಲಿದ್ದಾಗ ದಲಿತರ ಮನೆಗೆ ಹೋಗದವರು ಈಗ ನಾಟಕ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಬಿಜೆಪಿ ಅಧಿಕಾರವಧಿಯಲ್ಲಿ ಎಸ್ಸಿಪಿಟಿಎಸ್ಪಿ ಅಡಿಯಲ್ಲಿ 22 ಸಾವಿರ ಕೋಟಿ ರೂ.ಖರ್ಚು ಮಾಡಿದ್ದರು. ಆದರೆ, ನಾವು 89 ಸಾವಿರ ಕೋಟಿ ರೂ.ಖರ್ಚು ಮಾಡಿದ್ದೇವೆ. ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 1 ಕೋಟಿ ರೂ.ವರೆಗಿನ ಸರಕಾರಿ ಕಾಮಗಾರಿಗಳಿಗೆ ಮೀಸಲಾತಿ ನೀಡುವ ಕಾನೂನು ಜಾರಿಗೆ ತಂದಿದ್ದೇವೆ. ಬಿಜೆಪಿ ಆಡಳಿತವಿರುವ ಯಾವ ರಾಜ್ಯದಲ್ಲಿಯೂ ಇಂತಹ ಕಾನೂನು ಇಲ್ಲ ಎಂದು ಅವರು ಹೇಳಿದರು.
ಜೆಡಿಎಸ್‌ನವರು ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ. ಅವರು 25 ಸ್ಥಾನ ಗೆದ್ದರೆ ಅದೇ ಹೆಚ್ಚು. ದೇವರಾಜ ಅರಸು ಕಾಲದಲ್ಲಿ ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತರಲಾಗಿತ್ತು. ಅದೇ ರೀತಿ ನಮ್ಮ ಸರಕಾರ ತಾಂಡಾ, ಹಾಡಿ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ವಾಸಿಸುವವನೆ ಮನೆ ಒಡೆಯ ಕಾನೂನು ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.
ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎನ್ನುವ ಕೇಂದ್ರ ಸರಕಾರ, ಉದ್ಯಮಿಗಳ 2.50 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿದೆ. ಮನಮೋಹನ್‌ಸಿಂಗ್ ಸರಕಾರ ರೈತರ 72 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿತ್ತು. ಹಣಕಾಸು ಸಚಿನವಾಗಿ 13 ಬಜೆಟ್ ಮಂಡಿಸಿರುವ ನನಗೂ ದೇಶದ ಆರ್ಥಿಕ ಪರಿಸ್ಥಿತಿ ಗೊತ್ತಿದೆ ಎಂದು ಅವರು ಹೇಳಿದರು.
ಜಿಎಸ್‌ಟಿಗೆ ನಮ್ಮ ವಿರೋಧವಿಲ್ಲ. ಆದರೆ, ತೆರಿಗೆ ಪ್ರಮಾಣ ಗರಿಷ್ಠ ಶೇ.18 ರಷ್ಟಿರಬೇಕು. ಪೆಟ್ರೋಲ್, ಡಿಸೇಲ್ ಜಿಎಸ್‌ಟಿ ವ್ಯಾಪ್ತಿಗೆ ಬರಬೇಕು. ಕೇಂದ್ರದಲ್ಲಿ ಮುಂದೆ ನಾವು ಅಧಿಕಾರಕ್ಕೆ ಬಂದು ಈ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಮುಖ್ಯಮಂತ್ರಿ ಆಗುವುದು ಬಹಳ ಮುಖ್ಯ ಅಲ್ಲ. ಈ ರಾಜ್ಯ, ದೇಶ, ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕು. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು. ಮತದಾರರು ಬಿಜೆಪಿಯನ್ನು ತಿರಸ್ಕರಿಸಬೇಕು. ನಮ್ಮ ಕಾರ್ಯಕರ್ತರು ಮನೆಗೆ, ಮನೆಗೆ, ಹಳ್ಳಿಗಳಿಗೆ ಹೋಗಿ ರಾಜ್ಯ ಸರಕಾರದ ಸಾಧನೆಗಳನ್ನು ತಿಳಿಸಬೇಕು ಎಂದು ಅವರು ಕರೆ ನೀಡಿದರು.
ಕಳೆದ ಚುನಾವಣೆಯಲ್ಲಿ ನೀಡಿದ್ದ 165 ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ರಾಜ್ಯದ 6.50 ಕೋಟಿ ಜನರಿಗೆ ಒಂದಲ್ಲ ಒಂದು ಕಾರ್ಯಕ್ರಮ ನೀಡಿದ್ದೇವೆ. ಈ ಹಿಂದೆ ಯಾವ ಸರಕಾರವು ಮಾಡಿರದ ಸಾಧನೆಯನ್ನು ನಾವು ಮಾಡಿದ್ದು, ಜನತೆಯ ಆಶೀರ್ವಾದ ಇದೇ ರೀತಿ ನಮ್ಮ ಮೇಲಿರಲಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.