×
Ad

ಎಲ್ಲ ವರ್ಗದವರಿಗೂ ‘ಶಾದಿಭಾಗ್ಯ’ ಯೋಜನೆ ವಿಸ್ತರಣೆ: ಯಡಿಯೂರಪ್ಪ ಭರವಸೆ

Update: 2018-04-29 19:57 IST

ಧಾರವಾಡ, ಎ. 29: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರಿಗೂ ‘ಶಾದಿಭಾಗ್ಯ’ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.

ರವಿವಾರ ಇಲ್ಲಿನ ಕುಂದಗೋಳದಲ್ಲಿ ಮಾತನಾಡಿದ ಅವರು, ಎ.30 ರಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಬಗ್ಗೆ ಘೋಷಣೆ ಮಾಡಲಾಗುವುದು. ಇದರಿಂದ ರೈತರ ಮತಗಳು ಬಿಜೆಪಿಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಬಳಿಕ ಕಾಂಗ್ರೆಸ್‌ಗೆ ಹೊಡೆತ ಬೀಳಲಿದ್ದು, ಸಿಎಂ ಸಿದ್ದರಾಮಯಯ್ಯ ಹೋದ ಕಡೆ ನಿಮ್ಮನ್ನ ಬಡಿಗೆಯಿಂದ ಹೊಡೆಯುತ್ತಾರೆಂದು ಎಚ್ಚರಿಸಿದ ಅವರು, ಸರಕಾರದ ಖಜಾನೆ ಲೂಟಿ ಮಾಡಿದ ಲಜ್ಜೆಗೆಟ್ಟ ಸಿಎಂ ಸಿದ್ದರಾಮಯ್ಯ ಎಂದು ಟೀಕಿಸಿದರು.

ಚುನಾವಣೆಯಲ್ಲಿ ರಾಜ್ಯದ ಜನತೆ ಸಿದ್ದರಾಮಯ್ಯನವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದ ಯಡಿಯೂರಪ್ಪ, ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ. ನಾನು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೈಲಿಗೆ ಕಳುಹಿಸುತ್ತೇನೆ. ಸಿದ್ದರಾಮಯ್ಯರನ್ನು ಜೈಲಿಗೆ ಕಳಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಗುಡುಗಿದರು.

ಸಿದ್ದರಾಮಯ್ಯನೇ ಕಾಂಗ್ರೆಸಿನ ಕೊನೆಯ ಮುಖ್ಯಮಂತ್ರಿ. ಸಿದ್ದರಾಮಯ್ಯನವರ ಎಲ್ಲ ಹಗರಣಗಳನ್ನು ಬಯಲಿಗೆಳೆಯುತ್ತೆನೆ. ಇನ್ನು 10 ದಿನಗಳಲ್ಲಿ ಕಾಂಗ್ರೆಸ್ ಸರಕಾರ ಮನೆಗೆ ಹೋಗುತ್ತದೆ. ಸಿದ್ದರಾಮಯ್ಯ ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಮನೆಗೆ ಹೋಗುತ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಜಾತಿಯ ವಿಷ ಬೀಜ ಬಿತ್ತಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ಸಿದ್ದರಾಮಯ್ಯ ದುರುಪಯೋಗ ಮಾಡಿಕೊಂಡಿದ್ದು, ತಮ್ಮ ಎಲ್ಲ ಹಗರಣಗಳನ್ನು ಮುಚ್ಚಿ ಹಾಕಿದ್ದಾರೆ ಎಂದ ಅವರು, ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ ಹೊರಗಿನವರು ಎಂದು ಹೇಳುವ ಸಿದ್ದರಾಮಯ್ಯ, ರಾಹುಲ್ ನಿಮ್ಮ ಚಿಕ್ಕಪ್ಪನ ಮಗನಾ ? ಸೋನಿಯಾ ಗಾಂಧಿ ನಿಮ್ಮ ಚಿಕ್ಕಮ್ಮನಾ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News