ದಾವಣಗೆರೆ: ಬಿಜೆಪಿ ಅಭ್ಯರ್ಥಿಗಳ ಪರ ಅಮಿತ್ ಶಾ ರೋಡ್ ಶೋ

Update: 2018-04-29 16:39 GMT

ದಾವಣಗೆರೆ,ಎ.29: ವಾಣಿಜ್ಯ ನಗರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು. 

ಇಲ್ಲಿನ ನಗರದೇವತೆ ದುರ್ಗಾಂಬಿಕ ದೇವಿ ದೇವಸ್ಥಾನಕ್ಕೆ 11.50ಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದ ಅವರು, ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು ಮೂರು ಗಂಟೆಗಳ ಕಾಲ ರೋಡ್ ಶೋ ನಡೆಸಿದರು. ನಂತರ ದೇವಸ್ಥಾನದ ಹೊರಗೆ ಬರುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರತ್ತ ಶಾ ಕೈ ಬೀಸುತ್ತಿದ್ದಂತೆಯೇ ಮೋದಿ..ಮೋದಿ..ಎಂಬ ಘೋಷಣೆ ಮೊಳಗಿದವು.

ಹೊಂಡದ ವೃತ್ತದ ಮದಕರಿ ನಾಯಕನ ಪುತ್ಥಳಿಗೆ ಅಮಿತ್ ಶಾ ಮಾಲಾರ್ಪಣೆ ಮಾಡಿ ಬಿಜೆಪಿ ರಥವನ್ನೇರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರತ್ತ ಕೈ ಬೀಸುತ್ತಾ ಸಾಗಿದರು.ನಂತರ ಅರುಣಾ ಸರ್ಕಲ್, ರಾಮ್ ಅಂಡ್ ಕೋ ಸರ್ಕಲ್, ರೆಡ್ಡಿ ಬಿಲ್ಡಿಂಗ್ ರೋಡ್, ವಿನೋಬ ನಗರದ ಪ್ರಮುಖ ರಸ್ತೆಯ ಮೂಲಕ ಶ್ರೀ ಶೈಲ ಮಠದ ಬಳಿ ರೋಡ್ ಶೋ ಅಂತ್ಯಗೊಂಡಿತು. ರೋಡ್ ಶೋ ಮಾರ್ಗದುದ್ದಕ್ಕೂ ವಿಶೇಷ ಭದ್ರತಾ ಪಡೆಯ ಭದ್ರತೆ ಕಲ್ಪಿಸಲಾಗಿತ್ತು. ಕಮಾಂಡೋಗಳು ಭದ್ರತೆಯಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿದರು.  

ತದನಂತರ ಜಿಎಂಐಟಿ ಗೆಸ್ಟ್ ಹೌಸ್‍ನಲ್ಲಿ ಉಪಹಾರ ಸೇವಿಸಿದ ಅಮಿತ್ ಶಾ ಹೆಲಿಕ್ಯಾಪ್ಟರ್ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಪ್ರಯಾಣ ಬೆಳೆಸಿದರು.

ಮಹಿಷಾಸುರ ಮರ್ದಿನಿ ಪೂಜೆ
ನಗರ ದೇವತೆ ದುರ್ಗಾಂಬಿಕೆಗೆ ಪ್ರತಿವಾರದಂತೆ ರವಿವಾರವಾದ ಇಂದು ಬುತ್ತಿ ಪೂಜೆ ನಡೆಸಬೇಕಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ದೇವತೆಯ ದರ್ಶನಕ್ಕೆ ಬರುತ್ತಾರೆ ಎಂಬ ಹಿನ್ನಲೆಯಲ್ಲಿ, ವರ್ಷಕ್ಕೊಮ್ಮೆ ಜಾತ್ರೆಯ ಸಂದರ್ಭ ಮಾಡುವ ಮಹಿಷಾಸುರ ಮರ್ದಿನಿ ಪೂಜೆ ನರೆವೇರಿಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ಕಾರ್ಯಕರ್ತರ ಬಂಧನ 
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಾವಣಗೆರೆಗೆ ಆಗಮಿಸುವ ಕೆಲ ಕ್ಷಣಗಳ ಮುಂಚೆ ದೂಡಾ ಸದಸ್ಯ ಶಿವಾಲಿ ಶಿವಕುಮಾರ, ಕರಿಗಾರ ಬಸಪ್ಪ ಸೇರಿದಂತೆ ಅನೇಕರು ಅಮಿತ್ ಶಾ ಆಗಮಿಸುವ ವೇಳೆ ಪ್ರತಿಭಟಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಕಾಂಗ್ರೆಸ್ ಪರ ಘೋಷಣೆ ಕೂಗುತ್ತಿದ್ದ ನಾಲ್ವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು. ತಾವು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದರೂ, ಮುಂಜಾಗ್ರತೆಯಾಗಿ ನಾಲ್ವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು. 

ಶ್ರೀಶೈಲ ಶ್ರೀ-ಅಮಿತ ಶಾ ಭೇಟಿ ಇಲ್ಲ
ಶ್ರೀಶೈಲ ಪೀಠದ ಸ್ವಾಮಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡುವ ಕಾರ್ಯಕ್ರಮವಿತ್ತು. ಆದರೆ, ಶ್ರೀಶೈಲ ಜಗದ್ಗುರುಗಳ ಪೂರ್ವ ನಿರ್ಧರಿತ ಕಾರ್ಯಕ್ರಮದ ನಿಮಿತ್ತ ತೆರಳಿದ್ದರಿಂದ ಅಮಿತ್ ಶಾ ಶ್ರೀಶೈಲ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ರದ್ದಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News