ನಾನು ಯಾರಿಗೂ ಬೆದರಿಕೆ ಹಾಕಿಲ್ಲ: ಮೋಟಮ್ಮ ಪುತ್ರಿ ನಯನಾ ಸ್ಪಷ್ಟನೆ

Update: 2018-04-29 17:32 GMT

ಮೂಡಿಗೆರೆ, ಎ.29: ತನ್ನ ತಾಯಿ, ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಅವರಿಗೆ ಕ್ಷೇತ್ರದಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದ ಕೆಲವರು ತನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ನಯನಾ ಮೋಟಮ್ಮ ಸ್ಪಷ್ಟನೆ ನೀಡಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಆವುತಿ ಹೋಬಳಿಯ ನರಿಗುಡ್ಡೆ ಎಂಬಲ್ಲಿಗೆ ತಾನು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ, ಮತಯಾಚನೆಗಾಗಿ ಮನೆಮನೆ ಭೇಟಿಗೆ ತೆರಳಿದ್ದಾಗ ಬೇರೆ ಪಕ್ಷದ ಕೆಲ ವ್ಯಕ್ತಿಗಳು ನನ್ನ ಹಾಗೂ ನನ್ನೊಂದಿಗಿದ್ದ ಬೆಂಬಲಿಗರ ಮೇಲೆ ಉದ್ದೇಶಪೂರ್ವಕವಾಗಿ, ಸುಖಾಸುಮ್ಮನೆ ಜಗಳಕ್ಕೆ ಬಂದಿದ್ದಾರೆ. ಆ ವೇಳೆ ತಾನು ಹಾಗೂ ಬೆಂಬಲಿಗರು ಜಗಳಕ್ಕೆ ಬಂದವರನ್ನು ಸಮಾಧಾನಪಡಿಸಿ ಅಲ್ಲಿ ಮತಯಾಚಿಸಿ ಮುಂದಕ್ಕೆ ತೆರಳಿದ್ದೇವೆ. ತಾನು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಶನಿವಾರ ತಮಗಾಗದ ಕೆಲ ವ್ಯಕ್ತಿಗಳು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳನ್ನು ಹರಿಯಬಿಟ್ಟಿದ್ದಾರೆ. ಹಾಗೂ ಕೆಲ ಮಾಧ್ಯಮಗಳಿಗೂ ತನ್ನ ವಿರುದ್ಧ ಸುದ್ದಿ ನೀಡಿದ್ದಾರೆ. ಇದು ಸುಳ್ಳು ಸುದ್ದಿ. ನಿಜಕ್ಕೂ ನರಿಗುಡ್ಡೆಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಕ್ಷುಲ್ಲಕ ವಿಚಾರ ಮುಂದಿರಿಸಿ ನನ್ನ ತೇಜೋವಧೆಗೆ ಕೆಲವರು ಮುಂದಾಗಿದ್ದಾರಷ್ಟೇ. ಹೀಗೆಲ್ಲಾ ಮಾಡಿ ವಾಮಮಾರ್ಗದ ಮೂಲಕ ಪ್ರತಿಪಕ್ಷದ ಅಭ್ಯರ್ಥಿ ಗೆಲ್ಲಬಹುದೆಂಬ ಕನಸು ಕಾಣುತ್ತಿದ್ದಾರೆ ಎಂದು ಹೇಳಿದರು.

ತನ್ನ ತಾಯಿ ಮೋಟಮ್ಮ ಮೂರು ಬಾರಿ ಶಾಸಕರಾಗಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿ ಸಂಪುಟ ದರ್ಜೆ ಸಚಿವರಾಗಿ ಎರಡು ಬಾರಿ ಎಂಎಲ್‍ಸಿಯಾಗಿ ಪ್ರತಿಪಕ್ಷದ ನಾಯಕಿಯಾಗಿ ಕ್ಷೇತ್ರದಲ್ಲಿ ಕಂಡರಿಯದಷ್ಟು ಕೆಲಸ ಮಾಡಿದ್ದಾರೆ. ಶಾಶ್ವತ ಯೋಜನೆಗಳನ್ನೂ ತಂದಿದ್ದಾರೆ. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳನ್ನು ರಚಿಸಿ, ಸರ್ಕಾರದ ಸಕಲ ಸವಲತ್ತು ಸಿಗುವಂತೆ ಮಾಡಿದ್ದಾರೆ. ಇಂತಹ ಜನಮೆಚ್ಚುವ ಕಾರ್ಯಗಳಿಂದ ಜನತೆ ಈ ಬಾರಿ ಮೋಟಮ್ಮ ಅವರನ್ನು ಗೆಲ್ಲಿಸಲು ಉತ್ಸಾಹ ತೋರುತ್ತಿದ್ದಾರೆ. ಇದನ್ನು ಬೇರೆ ಪಕ್ಷಗಳು ಸಹಿಸುತ್ತಿಲ್ಲ. ಹೇಗಾದರೂ ಮಾಡಿ ಕೆಟ್ಟ ಹೆಸರು ತರಲು ಹರಸಾಹಸ ನಡೆಸುತ್ತಿವೆ. ಅದರ ಭಾಗವೇ ಆವುತಿ ಹೋಬಳಿಯ ನರಿಗುಡ್ಡೆಯ ಕ್ಷುಲ್ಲಕ ಘಟನೆಯಾಗಿದೆ. ಇದಕ್ಕೆ ಮತದಾರರು ಕಿವಿಗೊಡದೆ ಕಾಂಗ್ರೆಸನ್ನು ಜನ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News