×
Ad

ಈ ಚುನಾವಣೆಯಲ್ಲಿ ಕನಿಷ್ಟ 40-50 ಸಾವಿರ ಮತಗಳ ಅಂತರದಿಂದ ಜಯ: ಶಾಸಕ ಮಧುಬಂಗಾರಪ್ಪ

Update: 2018-04-29 23:16 IST

ಸೊರಬ,ಎ.29: ಕಾಂಗ್ರೆಸ್‍ನ ಹಲವು ಕಾರ್ಯಕರ್ತರು ಸೇರಿದಂತೆ ಬೇರೆ ಬೇರೆ ಪಕ್ಷಗಳ ಕಾರ್ಯಕರ್ತರು ನನ್ನ ಐದು ವರ್ಷಗಳ ಕಾರ್ಯವೈಖರಿಯನ್ನು ಮೆಚ್ಚಿ ಜಾತ್ಯಾತೀತವಾಗಿ ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಕನಿಷ್ಟ 40 ರಿಂದ 50 ಸಾವಿರ ಮತಗಳ ಅಂತರದಿಂದ ಜಯಗಳಿಸುತ್ತೇನೆ ಎಂದು ಶಾಸಕ ಮಧುಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ತಾಲೂಕಿನಾದ್ಯಂತ ಜೆಡಿಎಸ್‍ನ ಚುನಾವಣಾ ಪ್ರಚಾರ ಮುಗಿದಿದ್ದು, ಮುಂದಿನ ಸಭೆಗಳು ಕೊನೆಯ ಹಂತದ ಚುನಾವಣಾ ಪ್ರಚಾರವಾಗಲಿದೆ. ತಾಲೂಕಿನಲ್ಲಿ ಮತದಾರರು ಅತಿ ವಿಶ್ವಾಸ ಮತ್ತು ಪ್ರೀತಿಯಿಂದ ತಮ್ಮ ಗ್ರಾಮಗಳಿಗೆ ನನ್ನನ್ನು ಬರಮಾಡಿಕೊಳ್ಳುತ್ತಿದ್ದು, ನಿರೀಕ್ಷೆ ಮೀರಿ ಜನ ಸ್ಪಂದಿಸುತ್ತಿದ್ದಾರೆ. ಕುಮಾರ್ ಬಂಗಾರಪ್ಪ ಮತ್ತು ಕಾಂಗ್ರೆಸ್‍ನವರು ಢೋಂಗಿ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು ತಾಲೂಕಿನಾದ್ಯಂತ ಕುಮಾರ್ ಬಂಗಾರಪ್ಪ ಒಂದೇ ರೀತಿಯ ಭಾಷಣವನ್ನು ಬೆಳಗ್ಗೆಯಿಂದ ಸಾಯಂಕಾಲದವರೆಗೂ ಬೇರೆ ಬೇರೆ ಗ್ರಾಮಗಳಲ್ಲಿ ತಮ್ಮ ಜೊತೆಗೆ ಕರೆದುಕೊಂಡು ಹೋಗುವ ಆದೇ ಜನರಿಗೆ ಮಾಡುತ್ತಿದ್ದಾರೆ. ಎಲ್ಲಿಯೂ ಅವರ ಸಭೆಗಳಗೆ ಜನ ಸ್ಪಂದಿಸುತ್ತಿಲ್ಲ ಎಂದರು.

ಪ್ರತಿ ಸಭೆಗಳಲ್ಲಿಯೂ ಕುಮಾರ್ ಬಂಗಾರಪ್ಪ ನೀರಾವರಿ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ನೀರಾವರಿ ಮಂತ್ರಿಯಾಗಿದ್ದಾಗ ತಾಲೂಕಿನ ಯೋಜನೆಗಳ ಅನುಷ್ಟಾನಕ್ಕೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ಅವರು, ಪಾದಯಾತ್ರೆ ಮೂಲಕ ಸರ್ಕಾರದ ಗಮನ ಸೆಳೆದು ಕಚವಿ ಏತ ನೀರಾವರಿ ಯೋಜನೆ ಮಂಜೂರಾಗಿಸುವಲ್ಲಿ ಯಶಸ್ವಿಯಾಗಿದ್ದೇನೆ. ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಬಾಕಿ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.

ತಾಲೂಕು ಒಂದೇ ಕುಟುಂಬ ಆಳ್ವಿಕೆಯಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವ ಕಾಂಗ್ರೆಸ್ ಅಭ್ಯರ್ಥಿ ರಾಜು ತಲ್ಲೂರು ಆರೋಪಕ್ಕೆ ಉತ್ತರಿಸಿದ ಅವರು, ಸೊರಬ ಕ್ಷೇತ್ರ ಸ್ವಾಭಿಮಾನದ ರಾಜಕಾರಣಕ್ಕೆ ಹೆಸರು ವಾಸಿವಾಸಿಯಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಕಾಂಗ್ರೆಸ್ ಪಕ್ಷವೇ ಒಂದು ಕುಟುಂಬ ಆಳ್ವಿಕೆಗೆ ಸೀಮಿತವಾಗಿದೆ ಎಂದರು..

ತಾಲೂಕಿನಲ್ಲಿ ಜೆಡಿಎಸ್ ಗೆಲ್ಲಿಸುವ ಉದ್ದೇಶದಿಂದ ಕಾಂಗ್ರೆಸ್‍ನಿಂದ ತಲ್ಲೂರು ರಾಜುರವರಿಗೆ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಧುಬಂಗಾರಪ್ಪ, ತಾಲೂಕಿನ ಭಗೀರಥರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 4ನೇ ಸ್ಥಾನ ಪಡೆದವರಾಗಿದ್ದಾರೆ. ಇಂಥವರೊಂದಿಗೆ ಯಾವುದೇ ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ವ್ಯಂಗ್ಯವಾಡಿದರು.

ಕನಾರ್ಟಕಕ್ಕೆ ಕುಮಾರಣ್ಣ ಎನ್ನುವ ಅಭಿಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸೇರಿ ಸೊರಬಕ್ಕೆ ಮಧು ಅಣ್ಣ ಎಂದು ಮನೆಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಜಿಲ್ಲೆಯಲ್ಲಿ ಮೇ2 ನೇ ತಾರೀಖಿನಿಂದ ಎರಡನೇ ಹಂತದ ಚುನಾವಣಾ ಪ್ರಚಾರವನ್ನು ಗೀತಾ ಶಿವರಾಜ್ ಕುಮಾರ್ ನಡೆಸಲಿದ್ದು, ಮುಂದಿನ ದಿನದಲ್ಲಿ  ಜಡೆ, ಆನವಟ್ಟಿ ಹಾಗೂ ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯಲ್ಲಿ ಪ್ರಚಾರ ಸಭೆ ನಡೆಸುವುದಾಗಿ ಮಾಹಿತಿ ನೀಡಿದರು. 

ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ವಕ್ತಾರ ಎಂ.ಡಿ.ಶೇಖರ್, ಕೆ.ವಿ.ಗೌಡ, ಸಯದ್ ಅತೀಕ್, ಯಲಸಿ ಹನುಮಂತಪ್ಪ, ಕುಪ್ಪೆ ಜಗದೀಶ್ ಮತ್ತಿರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News