ಕೋಮುವಾದಿಗಳಿಗೆ ಬೆಂಬಲ ನೀಡುವುದು ಅಂಬೇಡ್ಕರ್ ಗೆ ಮಾಡಿದ ಅಪಮಾನ: ಬಸವ ಶರಣ ಸ್ವಾಮೀಜಿ

Update: 2018-04-29 18:04 GMT

ಮೈಸೂರು,ಎ.29: ಜಾತ್ಯಾತೀತ ಮತ್ತು ಕೋಮುವಾದದ ನಡುವೆ ಈ ಬಾರಿಯ ಚುನಾವಣೆ  ನಡೆಯುತ್ತಿದ್ದು, ಕೋಮುವಾದದ ಅಜೆಂಡಾ ಏನು ಎಂಬುದನ್ನು ಆ ಪಕ್ಷದ ಸಚಿವರೊಬ್ಬರು ಸಾಬೀತು ಪಡಿಸಿದ್ದಾರೆ. ಅಂಬೇಡ್ಕರ್ ಅನುಯಾಯಿಗಳು ಕೋಮುವಾದಿ ಪಕ್ಷಗಳಿಗೆ ಬೆಂಬಲ ಕೊಡುವುದು ಅಂಬೇಡ್ಕರ್ ಅವರಿಗೆ ಮಾಡಿದ ಬಹುದೊಡ್ಡ ಅಪಮಾನ ಎಂದು ಬೆಳಗಾವಿ ನಿಷ್ಕಲ ಮಂಟಪದ ಬಸವ ಶರಣ ಸ್ವಾಮೀಜಿ ಹೇಳಿದರು.

ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ರವಿವಾರ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ಸಂಯುಕ್ತಾಶ್ರಯದಲ್ಲಿ ವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿಯ ಅಂಗವಾಗಿ ಆಯೋಜಿಸಿದ್ದ 'ಪ್ರಜಾಸತ್ತೆಯ ಉಳಿವಿಗಾಗಿ ಚಳವಳಿಗಳ ಜಾವಾಬ್ಧಾರಿ' ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೀಸಲಾತಿಯನ್ನು ತೆಗೆಯಬೇಕೆಂಬುದು ಕೇಂದ್ರ ಬಿಜೆಪಿಯ ಮತ್ತು  ಉತ್ತರ ಭಾರತದ ಕೆಲ ರಾಜ್ಯಗಳ ಅಜೆಂಡವಾಗಿದೆ. ವೈಧಿಕರ ವಂಶಸ್ಥರು ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಮೀಸಲಾತಿಯಿಂದಾಗಿ ದೇಶ ಉಳಿದಿರುವುದು ಎಂಬುದನ್ನು ಕೋಮುವಾದಿಗಳಿಗೆ ಚಳವಳಿಗಳ ಮೂಲಕ ಉತ್ತರಿಸಬೇಕಾಗಿದೆ. ಇಂದು ಮಾನಸಿಕ ಗುಲಾಮಗಿರಿಯಲ್ಲಿ ಭಾರತ ನರಳಾಡುತ್ತಿದೆ. ಇದರಿಂದ ವೈದಿಕರ ಕುತಂತ್ರಗಳಿಗೆ ಬಲಿಯಾಗದೇ ಸ್ವಾಭಿಮಾನಿಗಳಾಗಿ ಬುದ್ಧ ಬಸವ ಅಂಬೇಡ್ಕರ ಅವರ ಚಿಂತನೆಗಳನ್ನು ಬಹುಜನರಾದವರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಸ್ವಾರ್ಥ, ಪ್ರತಿಷ್ಠೆಗಳನ್ನು ಬಿಟ್ಟು ನಾವು ಸಂಘಟಿತರಾಗಿ ಹೋರಾಟ ಮಾಡಿದಾಗ ಚಳವಳಿಗಳ ಶಕ್ತಿ ಉಳಿದು ಕೊಳ್ಳುತ್ತದೆ. ಹಾಗಾಗಿ, ಯುವಜನತೆ ಶಿಕ್ಷಣವಂತರಾಗಿದ್ದಾರೆ. ಎಲ್ಲರೂ ಒಟ್ಟಾಗಿ ಕೈ ಜೊಡಿಸಿದಾಗ ಕೋಮುವಾದಿಗಳಿಗೆ ಉಳಿಗಾಲ ವಿರುವುದಿಲ್ಲ. ನಾವೆಲ್ಲ ಒಂದಾಗಬೇಕಾಗಿರುವುದು ತುರ್ತಾಗಿದೆ ಎಂದು ಹೇಳಿದರು.

ಮೈಸೂರು ವಕೀಲ ಸಂಘದ ಕಾರ್ಯದರ್ಶಿ ತಿಮ್ಮಯ್ಯ, ದಸಂಸ ಮುಖಂಡರಾದ ಎಡದೊರೆ ಮಹದೇವಯ್ಯ, ಕಿರಂಗೂರು ಸ್ವಾಮಿ, ಪತ್ರಕರ್ತ ಕೆ.ದೀಪಕ್, ಸಂಶೋಧಕರ ಸಂಘ ಅಧ್ಯಕ್ಷ ಮಹದೇವಸ್ವಾಮಿ, ದಸಂಸ ಜಿಲ್ಲಾ ಖಜಾಂಚಿ ಕೆ.ವಿ.ದೇವೇಂದ್ರ, ಡಾ.ರಘುನಂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News